Link to home pageLanguagesLink to all Bible versions on this site
5
ದಯೆತೋರೆಂದು ಯೆಹೋವನಲ್ಲಿ ಪ್ರಾರ್ಥನೆ
1 ಯೆಹೋವನೇ, ನಮಗಾದ ದುರ್ಗತಿಯನ್ನು ನೆನಪಿಗೆ ತಂದುಕೋ;
ನಾವು ಗುರಿಯಾಗಿರುವ ಅವಮಾನವನ್ನು ದೃಷ್ಟಿಸಿ ನೋಡು.
2 ನಮ್ಮ ಸ್ವತ್ತು ಪರರ ಪಾಲಾಗಿದೆ,
ನಮ್ಮ ಮನೆಗಳು ಪರರ ಕೈವಶವಾಗಿವೆ.
3 ನಾವು ತಂದೆಯಿಲ್ಲದ ಅನಾಥರು,
ನಮ್ಮ ತಾಯಂದಿರು ವಿಧವೆಯರಾಗಿದ್ದಾರೆ.
4 ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತೇವೆ;
ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತೇವೆ.
5 ನಮ್ಮನ್ನು ಹಿಂದಟ್ಟುವವರು ನಮ್ಮ ಕುತ್ತಿಗೆಯನ್ನು ಹಿಡಿದಿದ್ದಾರೆ, ಬಳಲಿಹೋಗಿದ್ದೇವೆ, ಯಾವ ವಿಶ್ರಾಂತಿಯೂ ಇಲ್ಲ.
6 ಹೇಗಾದರೂ ಹೊಟ್ಟೆ ತುಂಬಾ ಅನ್ನ ತಿನ್ನೋಣ ಎಂದು ಐಗುಪ್ತ್ಯರಿಗೂ
ಮತ್ತು ಅಶ್ಶೂರ್ಯರಿಗೂ ಅಧೀನರಾದೆವು.
7 ನಮ್ಮ ಪೂರ್ವಿಕರು ಪಾಪಮಾಡಿ ಇಲ್ಲದೆ ಹೋದರು;
ಅವರ ದೋಷಫಲವನ್ನು ನಾವು ಅನುಭವಿಸಬೇಕಾಯಿತು.
8 ಗುಲಾಮರಾಗಿದ್ದವರು ನಮಗೆ ದಣಿಗಳಾದರು, ಅವರ ಕೈಯಿಂದ ನಮ್ಮನ್ನು ಬಿಡಿಸುವವರೇ ಇಲ್ಲ.
9 ಆಹಾರಕ್ಕೋಸ್ಕರ ಬೆಳೆಯನ್ನು ಕೊಯ್ಯುತ್ತಿರುವಾಗ ಅರಣ್ಯದವರ ಕತ್ತಿಯಿಂದ ಪ್ರಾಣಾಪಾಯಕ್ಕೆ ಗುರಿಯಾಗಿದ್ದೇವೆ.
10 ಕ್ಷಾಮಕಾಲದ ಭೀಕರ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.
11 ಚೀಯೋನಿನ ಸತಿಯರ ಮತ್ತು ಯೆಹೂದದ ಊರುಗಳ ಕನ್ಯೆಯರ ಅತ್ಯಾಚಾರವಾಗುತ್ತಿದೆ.
12 ರಾಜಪುತ್ರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ; ವೃದ್ಧರು ಮಾನಭಂಗಪಟ್ಟರು.
13 ಯುವಭಟರಿಗೆ ಬೀಸುವ ಕಲ್ಲನ್ನು ಹೊರುವ ಗತಿ ಬಂತು; ಮಕ್ಕಳು ಸೌದೆಹೊರೆ ಹೊತ್ತು ಮುಗ್ಗರಿಸಬೇಕಾಯಿತು.
14 ವೃದ್ಧರು ಇನ್ನು ಚಾವಡಿಯಲ್ಲಿ ಸೇರರು, ಯುವಕರು ಇನ್ನು ವಾದ್ಯಬಾರಿಸರು.
15 ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯ ನಲಿವುಗಳು ದುಃಖವಾಗಿ ಮಾರ್ಪಟ್ಟಿವೆ.
16 ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಗಿದೆ,
ಅಯ್ಯೋ, ನಮ್ಮ ಗತಿಯನ್ನು ಏನು ಹೇಳೋಣ! ನಾವು ಪಾಪಮಾಡಿದವರೇ ಸರಿ!
17 ನಮ್ಮ ಹೃದಯವು ಕುಂದಿದೆ ಮತ್ತು
ನಮ್ಮ ಕಣ್ಣುಗಳು ಮೊಬ್ಬಾಗಿವೆ.
18 ಯಾಕೆಂದರೆ ನರಿಗಳು ಹಾಳಾಗಿರುವ ಚೀಯೋನ್ ಪರ್ವತದ ಬಳಿ ಸಂಚರಿಸುತ್ತವೆ.
19 ಆದರೆ ಯೆಹೋವನೇ, ನೀನು ಶಾಶ್ವತವಾಗಿ ನೆಲೆಗೊಂಡಿದ್ದೀ,
ತಲತಲಾಂತರಕ್ಕೂ ನಿನ್ನ ಸಿಂಹಾಸನವು ಸ್ಥಿರವಾಗಿರುವುದು.
20 ನೀನು ನಮ್ಮನ್ನು ಸಂಪೂರ್ಣವಾಗಿ ಮರೆತಿರುವುದೇಕೆ?
ಏಕೆ ನಮ್ಮನ್ನು ಇಷ್ಟುಕಾಲ ಕೈಬಿಟ್ಟಿದ್ದೀ?
21 ಯೆಹೋವನೇ, ನೀನು ನಮ್ಮ ಮೇಲೆ ಬಲು ಸಿಟ್ಟುಗೊಂಡು ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ?
22 ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು.
ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು;

<- ಪ್ರಲಾಪಗಳು 4