2 ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲ್ಯರಿಗೆ ಸುನ್ನತಿ ಮಾಡು” ಎಂದು ಹೇಳಲು 3 ಯೆಹೋಶುವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು [a]ಸುನ್ನತಿ ಗುಡ್ಡದಲ್ಲಿ ಇಸ್ರಾಯೇಲ್ಯರಿಗೆ ಸುನ್ನತಿ ಮಾಡಿದನು. 4 ಯೆಹೋಶುವನು ಸುನ್ನತಿ ಮಾಡಿದ್ದಕ್ಕೆ ಕಾರಣವೇನಂದರೆ ಐಗುಪ್ತದಿಂದ ಹೊರಟು ಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು ಬಂದ ನಂತರ ಅರಣ್ಯದಲ್ಲಿ ಸತ್ತು ಹೋದರು. 5 ಅಲ್ಲಿಂದ ಬಂದಿದ್ದ ಗಂಡಸರಿಗೆಲ್ಲಾ ಸುನ್ನತಿಯಾಗಿತ್ತು. ಐಗುಪ್ತವನ್ನು ಬಿಟ್ಟ ನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ. 6 ಐಗುಪ್ತದಿಂದ ಬಂದ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದೆ ಹೋಗಿದ್ದರಿಂದ ಅವರು ತಮ್ಮ ಭಟರೆಲ್ಲರು ಸಂಹಾರವಾಗುವ ತನಕ ನಲವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಯೆಹೋವನು ತಾನು ಆ ಜನರ ಪೂರ್ವಿಕರಿಗೆ ವಾಗ್ದಾನ ಮಾಡಿದ್ದ [b]ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟನು. 7 ಆದುದರಿಂದ ಅವರ ಪೂರ್ವಿಕರಿಗೆ ಪ್ರತಿಯಾಗಿ ಹುಟ್ಟಿದ ಗಂಡು ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿಮಾಡಿರಲಿಲ್ಲ. ಆದುದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು. 8 ಸುನ್ನತಿಯಾದ ಮೇಲೆ ಆ ಜನರು ವಾಸಿಯಾಗುವ ತನಕ ತಮ್ಮ ತಮ್ಮ ಪಾಳೆಯಗಳಲ್ಲಿಯೇ ಇದ್ದರು. 9 ಯೆಹೋವನು ಯೆಹೋಶುವನಿಗೆ, “ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿ ಬಿಟ್ಟಿದ್ದೇನೆ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ [c]ಗಿಲ್ಗಾಲ್ ಎಂಬ ಹೆಸರಿರುತ್ತದೆ.
10 ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು. 11 ಮರುದಿನದಿಂದ ಆ ದೇಶದ ಧಾನ್ಯವನ್ನು ಊಟಕ್ಕೆ ಉಪಯೋಗಿಸಲು ತೊಡಗಿದರು. ಹೇಗೆಂದರೆ ಅದೇ ಪಸ್ಕಹಬ್ಬದ ದಿನದಲ್ಲಿ ಅವರು ಹುಳಿಯಿಲ್ಲದ ರೊಟ್ಟಿಗಳನ್ನೂ, ಸುಟ್ಟ ತೆನೆಗಳನ್ನೂ ತಿಂದರು. 12 ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು.