23
ಯೆಹೋಶುವನ ಬೀಳ್ಕೊಡುಗೆಯ ಪ್ರಬೋಧನೆ
1 ಯೆಹೋವನು ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹು ದಿನಗಳಾದ ಮೇಲೆ ಯೆಹೋಶುವನು ದಿನತುಂಬಿದ ಮುದುಕನಾದನು. 2 ಆತನು ಇಸ್ರಾಯೇಲ್ಯರ ಹಿರಿಯ ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಅಲ್ಲದೆ ಎಲ್ಲಾ ಇಸ್ರಾಯೇಲರ ಜನರನ್ನು ತನ್ನ ಬಳಿಗೆ ಕರಿಸಿ ಅವರಿಗೆ, “ನಾನು ದಿನತುಂಬಿದ ಮುದುಕನಾಗಿದ್ದೇನೆ. 3 ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಜನಾಂಗಗಳಿಗೆ ಮಾಡಿದೆಲ್ಲವನ್ನೂ ನೀವೆಲ್ಲರೂ ನೋಡಿದ್ದೀರಷ್ಟೇ. ಹೌದು, ನಿಮಗಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಯೆಹೋವನೇ. 4 ನಾನು ಯೊರ್ದನಿನಿಂದ ಪಶ್ಚಿಮದ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಮತ್ತು ಉಳಿದಿರುವವರ ದೇಶವನ್ನು ನಿಮಗೆ ಸ್ವತ್ತಾಗಿ ಕೊಟ್ಟಿದ್ದೇನೆ. 5 ನಿಮ್ಮ ದೇವರಾದ ಯೆಹೋವನು ತಾನೇ ಅವರನ್ನು ನಿಮ್ಮ ಕಣ್ಣೆದುರಿನಲ್ಲಿ ಹೊರಡಿಸಿಬಿಡುವನು. ಆತನ ವಾಗ್ದಾನದಂತೆ ಅವರ ದೇಶವನ್ನು ನೀವು ಸ್ವಂತ ಮಾಡಿಕೊಳ್ಳುವಿರಿ. 6 ಮೋಶೆಯ ಧರ್ಮಶಾಸ್ತ್ರವಿಧಿಗಳನ್ನೆಲ್ಲಾ ಸ್ಥಿರಚಿತ್ತದಿಂದ ಕೈಕೊಳ್ಳಿರಿ. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡಿರಿ. 7 ಉಳಿದಿರುವ ಈ ಅನ್ಯಜನಾಂಗಗಳ ಜೊತೆಯಲ್ಲಿ ಇಜ್ಜೋಡಾಗಬೇಡಿರಿ. ಅವರ ದೇವತೆಗಳ ಹೆಸರನ್ನು ಹೇಳಿ ಆರಾಧಿಸಲೂ ಬಾರದು ಪ್ರಮಾಣಮಾಡಲೂ ಬಾರದು. ಅವುಗಳಿಗೆ ಅಡ್ಡ ಬಿದ್ದು ಸೇವಿಸಲೂ ಬಾರದು. 8 ಈವರೆಗೆ ಹೇಗೊ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವನನ್ನೇ ಆತುಕೊಂಡಿರಿ. 9 ಯೆಹೋವನು ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾನೆ. ನಿಮ್ಮ ಮುಂದೆ ಈವರೆಗೂ ಒಬ್ಬನೂ ತಲೆಯೆತ್ತಿ ನಿಲ್ಲಲಿಲ್ಲವಲ್ಲಾ. 10 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು. 11 ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವನನ್ನೇ ಪ್ರೀತಿಸಿರಿ. 12 ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಸೇರಿಕೊಂಡು ಅವರೊಂದಿಗೆ ಗಂಡು ಹೆಣ್ಣು ಕೊಟ್ಟು ತಂದು ಸಂಬಂಧವನ್ನಿಟ್ಟುಕೊಂಡರೆ, 13 ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವುದೇ ಇಲ್ಲವೆಂದು ತಿಳಿದುಕೊಳ್ಳಿರಿ. ಅವರೇ ನಿಮಗೆ ಉರುಲೂ ಬೋನೂ ಆಗಿರುವರು. ಅವರು ಪಕ್ಕೆಗೆ ಹೊಡೆಯುವ ಕೊರಡೆಯಂತೆಯೂ ಕಣ್ಣಿಗೆ ಚುಚ್ಚುವ ಮುಳ್ಳಿನಂತೆಯೂ ಇರುವರು. ಕಡೆಯಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ಈ ಉತ್ತಮ ದೇಶದಲ್ಲಿ ನೀವು ಇಲ್ಲದಂತಾಗುವಿರಿ. 14 ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನು ಈಗ ಅನುಸರಿಸಬೇಕಾಗಿದೆ. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಾದದ ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿದೆ ಎಂಬುದು ನಿಮಗೆ ಮನದಟ್ಟಾಗಿದೆಯಲ್ಲ. 15 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ಈಗ ನಿಮಗೆ ಎಲ್ಲಾ ತರದ ಮೇಲನ್ನು ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಸಕಲ ವಿಧವಾದ ಕೇಡುಗಳನ್ನು ಬರಮಾಡಿ, ತಾನು ಕೊಟ್ಟಿರುವ ಈ ಉತ್ತಮ ದೇಶದಿಂದ ನಿಮ್ಮನ್ನು ತೆಗೆದು ನಾಶಮಾಡಿಬಿಡುವನು. 16 ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ ಅನ್ಯದೇವತೆಗಳಿಗೆ ಅಡ್ಡಬಿದ್ದು ಸೇವಿಸಿದರೆ ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುವುದು ಮತ್ತು ಆತನು ಕೊಟ್ಟ ಒಳ್ಳೆಯ ದೇಶದಿಂದ ನೀವು ತೆಗೆದುಹಾಕಲ್ಪಟ್ಟು ಬೇಗನೆ ನಾಶವಾದೀರಿ” ಎಂದನು.
<- ಯೆಹೋಶುವನು 22ಯೆಹೋಶುವನು 24 ->