21 ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧ ಜನರು ಇಸ್ರಾಯೇಲ್ ಕುಲಾಧಿಪತಿಗಳಿಗೆ ಹೀಗೆಂದು ಉತ್ತರಿಸಿದರು: 22 “ದೇವಾಧಿದೇವನಾದ ಯೆಹೋವನು ಇದಕ್ಕೆ ಸಾಕ್ಷಿ; ಆ ದೇವಾಧಿದೇವನಾದ ಯೆಹೋವನಿಗೆ ಇದು ಗೊತ್ತಿದೆ. ಇಸ್ರಾಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಯೆಹೋವನ ವಿರುದ್ಧವಾಗಿ ಪಾಪಮಾಡಿದವರು ಆಗಿದ್ದರೆ ಯೆಹೋವನು ನಮ್ಮನ್ನು ಈ ಹೊತ್ತೇ ನಮ್ಮ ಜೀವವನ್ನು ತೆಗೆದುಬಿಡಲಿ. 23 ನಾವು ಯೆಹೋವನಿಂದ ವಿಮುಖರಾಗಿ ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯ ನೈವೇದ್ಯ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಈ ಯಜ್ಞವೇದಿಯನ್ನು ಕಟ್ಟಿದ್ದರೆ ಯೆಹೋವನು ತಾನೇ ನಮ್ಮನ್ನು ಶಿಕ್ಷಿಸಲಿ. 24 ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದ್ದೇವಷ್ಟೇ, ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ನಿಮಗೇನು ಪಾಲಿದೆ?’ 25 ರೂಬೇನ್ಯರೇ, ಗಾದ್ಯರೇ, ಯೆಹೋವನು ನಿಮಗೂ ನಮಗೂ ನಡುವೆ ಈ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದಾನೆ. ಯೆಹೋವನಲ್ಲಿ ನಿಮಗೆ ಯಾವ ಪಾಲೂ ಇಲ್ಲ ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೈವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು. 26 ಈ ಕಾರಣದಿಂದಲೇ, ‘ಬನ್ನಿ, ಒಂದು ಯಜ್ಞವೇದಿಯನ್ನು ಕಟ್ಟೋಣ. ಅದು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವುದಕ್ಕಲ್ಲ,’ 27 ಆದರೆ ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಯಜ್ಞ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸಿ ಆರಾಧಿಸುವುದಕ್ಕೋಸ್ಕರ ನಮಗೂ ಹಕ್ಕಿದೆ ಎಂಬುದಕ್ಕೆ ಇದು ನಮಗೂ, ನಿಮಗೂ, ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಸಾಕ್ಷಿಯಾಗಿರುವುದು. ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ ಯೆಹೋವನಲ್ಲಿ ನಿಮಗೆ ಪಾಲಿಲ್ಲವೆಂದು ಹೇಳುವುದಕ್ಕೆ ಆಸ್ಪದವಿರುವುದಿಲ್ಲ. 28 ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ರೀತಿಯಾಗಿ ಹೇಳಿದರೆ ನಾವು ಅವರಿಗೆ ‘ಯೆಹೋವನ ಯಜ್ಞವೇದಿಯ ಮಾದರಿಯನ್ನು ನೋಡಿರಿ: ನಮ್ಮ ಪೂರ್ವಿಕರು ಇದನ್ನು ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಲಿಲ್ಲ; ಇದು ನಮ್ಮ ನಿಮ್ಮ ಮಧ್ಯದಲ್ಲಿ ಒಂದು ಸಾಕ್ಷಿಯಾಗಿದೆಯಷ್ಟೆ’ ಎಂದು ಹೇಳುವೆವು. 29 ನಮ್ಮ ದೇವರಾದ ಯೆಹೋವನ ಗುಡಾರದ ಮುಂದಿರುವ ಯಜ್ಞವೇದಿಯ ಹೊರತು ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸುವುದಕ್ಕೋಸ್ಕರ ಬೇರೊಂದು ಯಜ್ಞವೇದಿಯನ್ನು ಕಟ್ಟಿ ಯೆಹೋವನಿಗೆ ವಿರುದ್ಧವಾಗಿ ದ್ರೋಹಿಗಳಾಗಿರದಂತಾಗಲಿ. ಹಾಗೆ ನಮಗೆ ಎಂದಿಗೂ ಆಗದಿರಲಿ” ಎಂದರು.
30 ಯಾಜಕನಾದ ಫೀನೆಹಾಸನೂ ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳಾಗಿರುವ ಇಸ್ರಾಯೇಲ್ ಪ್ರಭುಗಳು, ರೂಬೇನ್, ಗಾದ್, ಮನಸ್ಸೆಯ ಕುಲಗಳವರ ಮಾತುಗಳನ್ನು ಕೇಳಿ ಸಂತೋಷಪಟ್ಟರು. 31 ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು ರೂಬೇನ್, ಗಾದ್, ಮನಸ್ಸೆ ಕುಲಗಳವರಿಗೆ “ನೀವು ಯೆಹೋವನಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಆತನು ನಮ್ಮ ಮಧ್ಯದಲ್ಲಿದ್ದಾನೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವನ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ” ಎಂದನು. 32 ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು, ಪ್ರಭುಗಳು, ಗಿಲ್ಯಾದ್ ಸೀಮೆಯಲ್ಲಿದ್ದ ರೂಬೇನ್ಯರು, ಗಾದ್ಯರು ಇವರ ಬಳಿಯಿಂದ ಕಾನಾನ್ ದೇಶದಲ್ಲಿದ್ದ ಇಸ್ರಾಯೇಲರ ಬಳಿಗೆ ಬಂದು, ಅವರಿಗೆ ಈ ವರ್ತಮಾನವನ್ನು ತಿಳಿಸಲು 33 ಅವರು ಬಹು ಸಂತೋಷಪಟ್ಟು ದೇವರನ್ನು ಕೊಂಡಾಡಿ ರೂಬೇನ್ ಗಾದ್ ಕುಲಗಳೊಡನೆ ಯುದ್ಧ ಮಾಡಿ ಅವರ ದೇಶವನ್ನು ಹಾಳುಮಾಡಬೇಕೆಂಬ ಆಲೋಚನೆಯನ್ನು ಬಿಟ್ಟರು. 34 ರೂಬೇನ್ಯರೂ ಗಾದ್ಯರೂ ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಯೇ ಸಾಕ್ಷಿ ಎಂದು ಹೇಳಿ ಅದಕ್ಕೆ ‡ಏದ್ ಎಂದರೆ ಸಾಕ್ಷಿ.ಏದ್ ಎಂಬ ಹೆಸರಿಟ್ಟರು.
<- ಯೆಹೋಶುವನು 21ಯೆಹೋಶುವನು 23 ->