Link to home pageLanguagesLink to all Bible versions on this site
14
ಯೋಬನು ದೇವರೊಂದಿಗೆ ಪ್ರಾರ್ಥಿಸಿದ್ದು
1 “ಮಾನವ ಜನ್ಮ ಪಡೆದವನು,
ಅಲ್ಪಾಯುಷ್ಯನಾಗಿಯೂ, ಕಳವಳದಿಂದ ತುಂಬಿದವನಾಗಿಯೂ ಇರುವನು.
2 ಹೂವಿನ ಹಾಗೆ ಅರಳಿ ಬಾಡುವನು,
ನೆರಳಿನಂತೆ ನಿಲ್ಲದೆ ಓಡಿಹೋಗುವನು.
3 ನೀನು ಇಂಥವನಾದ ನನ್ನ ಮೇಲೆ ಕಣ್ಣಿಟ್ಟು,
ನಿನ್ನ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುವಿಯಾ?
4 ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
5 ಮನುಷ್ಯನ ದಿನಗಳು ಇಷ್ಟೇ ಎಂಬುದು ತೀರ್ಮಾನವಾಗಿದೆಯಲ್ಲಾ;
ಅವನ ತಿಂಗಳುಗಳ ಲೆಕ್ಕವು ನಿನಗೆ ಗೊತ್ತು;
ದಾಟಲಾರದ ಗಡಿಗಳನ್ನು ಅವನಿಗೆ ನೇಮಿಸಿದ್ದಿ.
6 ನಿನ್ನ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸು,
ಅವನಿಗೆ ಸ್ವಲ್ಪ ವಿರಾಮವಿರಲಿ, ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.
ಮರಣದ ಅನಿವಾರ್ಯತೆ
7 ಕಡಿದ ಮರವೂ,
ತಾನು ಮೊಳೆಯುವುದನ್ನು ನಿಲ್ಲಿಸದೆ,
ಮತ್ತೆ ಚಿಗುರುವೆನೆಂದು ನಿರೀಕ್ಷಿಸುತ್ತದಲ್ಲವೇ!
8 ನೆಲದಲ್ಲಿ ಅದರ ಬೇರು ಹಳೆಯದಾದರೂ,
ಮಣ್ಣಿನಲ್ಲಿ ಸತ್ತರೂ,
9 ಮಳೆ ನೀರಿನ ವಾಸನೆಯಿಂದಲೇ ಅದು ಮೊಳೆತು, ಚಿಗುರಿ
ಗಿಡದ ಹಾಗೆ ಕವಲೊಡೆಯುವುದು.
10 ಮನುಷ್ಯನಾದರೋ ಸತ್ತು ಬೋರಲುಬೀಳುವನು,
ಪ್ರಾಣಹೋಗಲು ಅವನ ಅಂತ್ಯವಾಗುತ್ತದೆ.
11 ಸರೋವರದ ನೀರು ಬತ್ತುವಂತೆ,
ನದಿಯ ನೀರು ಆವಿಯಾಗಿ ಒಣಗುವ ಹಾಗೆ,
12 ಮನುಷ್ಯರು ಮಲಗಿಕೊಂಡು ಏಳದೇ ಇರುವರು;
ಆಕಾಶವು ಅಳಿದು ಹೋಗುವ ತನಕ ಅವರು ನಿದ್ರೆಯನ್ನು,
ತಿಳಿಯುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.
13 ನಿನ್ನ ಕೋಪವು ಇಳಿಯುವ ವರೆಗೆ ನನ್ನನ್ನು ಮರೆಮಾಡಿ,
ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು,
ನನಗೆ ಅವಧಿಯನ್ನು ಗೊತ್ತುಮಾಡಿ ಕಡೆಯಲ್ಲಿ ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!
14 ಒಬ್ಬ ಮನುಷ್ಯನು ಸತ್ತು ಪುನಃ ಬದುಕುವನೇ?
ಹಾಗಾಗುವುದಾದರೆ ನನಗೆ ಬಿಡುಗಡೆಯಾಗುವವರೆಗೆ,
ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.
15 ನೀನು ಕರೆದರೆ ಉತ್ತರಕೊಡುವೆನು,
ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಪ್ರೀತಿ ಹುಟ್ಟೀತು.
16 ಈಗ ನೀನು ನನ್ನ ಹೆಜ್ಜೆಗಳನ್ನು ಲೆಕ್ಕಿಸಿ,
ನನ್ನ ಪಾಪದ ಮೇಲೆ ಕಾವಲಾಗಿದ್ದೀಯಲ್ಲಾ!
17 ನನ್ನ ದ್ರೋಹವನ್ನು ಚೀಲದಲ್ಲಿಟ್ಟು ಮುದ್ರಿಸಿ,
ನನ್ನ ದೋಷವನ್ನು ಭದ್ರವಾಗಿ ಕಟ್ಟಿದ್ದೀ.
18 ಆದರೆ ಪರ್ವತವೂ ಬಿದ್ದು ಕರಗಿಹೋಗುವುದು,
ಬಂಡೆಯು ತನ್ನ ಸ್ಥಳದಿಂದ ಜರುಗುವುದು,
19 ನೀರು ಕಲ್ಲುಗಳನ್ನು ಸವೆಯಿಸುವುದು,
ಜಲಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವವು.
ಹೀಗೆಯೇ ಮನುಷ್ಯರ ನಿರೀಕ್ಷೆಯನ್ನು ಹಾಳುಮಾಡುವಿ.
20 ನೀನು ಅವನಿಗೆ ಶಾಶ್ವತವಾದ ಅಪಜಯವನ್ನುಂಟು ಮಾಡಿದ್ದರಿಂದ ಅವನು ಗತಿಸಿ ಹೋಗುವನು.
ನೀನು ಅವನ ಮುಖವನ್ನು ಮಾರ್ಪಡಿಸಿ ಅವನನ್ನು ತೊಲಗಿಸಿಬಿಡುವಿ.
21 ಅವನ ಮಕ್ಕಳು ಘನತೆಯನ್ನು ಹೊಂದುವುದು ಅವನಿಗೆ ತಿಳಿಯುವುದಿಲ್ಲ.
ಅವರು ಅಧೋಗತಿಗೆ ಗುರಿಯಾದರೂ ಅವನಿಗೆ ಗೋಚರವಾಗುವುದಿಲ್ಲ.
22 ಆದರೂ ಅವನ ದೇಹದ ಕಣಕಣವು ನೋವನ್ನು ಅನುಭವಿಸುವುದು,
ಅವನ ಆತ್ಮವು ಪ್ರಲಾಪಿಸುವುದು.”

<- ಯೋಬನು 13ಯೋಬನು 15 ->