6 “ಲೋಕದಲ್ಲಿ ನೀನು ನನಗೆ ಕೊಟ್ಟಿರುವ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು ಮತ್ತು ನೀನು ಇವರನ್ನು ನನಗೆ ಕೊಟ್ಟಿದ್ದೀ. ಇವರು ನಿನ್ನ ವಾಕ್ಯಕ್ಕೆ ವಿಧೇಯರಾಗಿದ್ದಾರೆ. 7 ನೀನು ನನಗೆ ಕೊಟ್ಟದ್ದೆಲ್ಲವೂ ನಿನ್ನಿಂದಲೇ ಬಂದಿದೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ. 8 ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು[g]ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ. 9 ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ಲೋಕಕ್ಕೋಸ್ಕರ ಬೇಡಿಕೊಳ್ಳದೆ, ನೀನು ನನಗೆ ಕೊಟ್ಟವರಿಗಾಗಿಯೇ ಬೇಡಿಕೊಳ್ಳುತ್ತೇನೆ, ಏಕೆಂದರೆ, ಇವರು ನಿನ್ನವರು. 10 ನನ್ನದೆಲ್ಲವೂ ನಿನ್ನದೇ ಮತ್ತು ನಿನ್ನದೆಲ್ಲವೂ ನನ್ನದೇ. ನಾನು ಇವರಲ್ಲಿ ಮಹಿಮೆಗೊಂಡಿದ್ದೇನೆ. 11 ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ,[h]ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು. 12 ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು.[i]ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ.
13 “ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ[j]ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ. 14 ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ, ನಾನು ಈ ಲೋಕದವನಲ್ಲದವನಾಗಿರುವ ಪ್ರಕಾರ ಇವರೂ ಈ ಲೋಕದವರಲ್ಲ. ಆದಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ. 15 ಇವರನ್ನು ಲೋಕದಿಂದ ತೆಗೆಯಬೇಕೆಂದು ನಾನು ಬೇಡಿಕೊಳ್ಳುವುದಿಲ್ಲ, ಆದರೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. 16 ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ. 17 ನೀನು ಸತ್ಯದಿಂದ ಇವರನ್ನು ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯ. 18 [k]ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ, ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ. 19 ಇವರು ನಿಜವಾಗಿ ಪ್ರತಿಷ್ಠಿರಾಗಬೇಕೆಂದು, ನನ್ನನ್ನು ನಾನೇ ಇವರಿಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ.