11 “ಆದಕಾರಣ ಇಸ್ರಾಯೇಲಿನ ದೇವರೂ, ಸೇನಾಧೀಶ್ವರನು ಆದ ಯೆಹೋವನು ಹೀಗೆನ್ನುತ್ತಾನೆ, ಆಹಾ, ಯೆಹೂದವನ್ನೆಲ್ಲಾ ನಿರ್ಮೂಲಮಾಡುವೆನು, ಕೇಡಿಗಾಗಿಯೇ ನಿಮ್ಮ ಮೇಲೆ ದೃಷ್ಟಿಯಿಡುವೆನು. 12 ಐಗುಪ್ತಕ್ಕೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಯೆಹೂದದ ಉಳಿದ ಜನರನ್ನು ನಾನು ಹಿಡಿದು ನಾಶಮಾಡುವೆನು; ಐಗುಪ್ತದಲ್ಲೇ ಒರಗಿ ಹೋಗುವರು; ಖಡ್ಗ ಮತ್ತು ಕ್ಷಾಮಗಳಿಂದ ನಾಶವಾಗುವರು; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಖಡ್ಗ ಮತ್ತು ಕ್ಷಾಮಗಳಿಂದ ಸತ್ತು ಅಪವಾದ, ಶಾಪ, ನಿಂದೆಗೆ ಮತ್ತು ದೂಷಣೆಗಳಿಗೆ ಗುರಿಯಾಗುವರು. 13 ನಾನು ಯೆರೂಸಲೇಮಿನವರನ್ನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು. 14 ಐಗುಪ್ತಕ್ಕೆ ಹೋಗಿ ಪ್ರವಾಸ ಮಾಡುತ್ತಿರುವ ಯೆಹೂದದ ಉಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವುದಿಲ್ಲ; ಓಡಿಬರುವ ಸ್ವಲ್ಪ ಜನರೇ ಹೊರತು ಯಾರೂ ಹಿಂದಿರುಗುವುದಿಲ್ಲ.
15 “ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡಿದ್ದ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು ಅಂತು ಐಗುಪ್ತದಲ್ಲಿಯೂ, ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ” ಹೀಗೆ ಹೇಳಿದರು, 16 “ಯೆಹೋವನ ಹೆಸರಿನಿಂದ ನೀನು ನಮಗೆ ನುಡಿದ ಮಾತುಗಳನ್ನು ಕೇಳುವುದಿಲ್ಲ. 17 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವುದಿಲ್ಲ ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ನಾವೂ ಮತ್ತು ನಮ್ಮ ಪೂರ್ವಿಕರೂ ನಮ್ಮ ಅರಸರೂ, ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು. 18 ಆದರೆ ನಾವು ಗಗನದ ಒಡತಿಗೆ ಧೂಪಹಾಕುವುದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವುದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ಕೊರತೆಗೂ ಗುರಿಯಾಗಿ ಖಡ್ಗ, ಕ್ಷಾಮಗಳಿಂದ ನಾಶವಾಗುತ್ತಿದ್ದೇವೆ. 19 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರವಾದ ಹೋಳಿಗೆಗಳನ್ನು ಮಾಡಿ ಪಾನದ್ರವ್ಯವನ್ನು ಅರ್ಪಿಸಿದ್ದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೋ?” ಎಂದರು. 20 ಆಗ ಯೆರೆಮೀಯನು ಗಂಡಸರಿಗೂ, ಹೆಂಗಸರಿಗೂ ಅಂತು ತನಗೆ ಆ ಉತ್ತರಕೊಟ್ಟ ಎಲ್ಲಾ ಜನರಿಗೂ, 21 “ನೀವು, ನಿಮ್ಮ ಪೂರ್ವಿಕರು, ನಿಮ್ಮ ಅರಸರು, ನಿಮ್ಮ ಪ್ರಧಾನರು, ಸಾಮಾನ್ಯ ಜನರು, ನೀವೆಲ್ಲರೂ ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ಹಾಕಿದ ಧೂಪವು ಯೆಹೋವನ ನೆನಪಿನಲ್ಲಿ ಇಲ್ಲವೋ, ಅದು ಆತನ ಜ್ಞಾಪಕಕ್ಕೆ ಬರಲಿಲ್ಲವೋ? 22 ನೀವು ನಡೆಸಿದ ದುರಾಚಾರಗಳನ್ನೂ, ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದುದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ನಾಶಕ್ಕೂ, ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ. 23 ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ, ನಿಬಂಧನೆಗಳನ್ನೂ, ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ” ಎಂದನು.
24 ಇದಲ್ಲದೆ ಯೆರೆಮೀಯನು ಹೆಂಗಸರಿಗೂ, ಎಲ್ಲಾ ಜನರಿಗೂ ಹೀಗೆ ಹೇಳಿದನು, “ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ. 25 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವೆವು ಎಂದು ನಾವು ಮಾಡಿಕೊಂಡ ಹರಕೆಗಳನ್ನು ಖಂಡಿತವಾಗಿ ತೀರಿಸುವೆವು ಎಂಬುದಾಗಿ ನೀವೂ, ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿ ಕೈಯಿಂದ ನೆರವೇರಿಸಿದ್ದೀರಲ್ಲಾ; ನಿಮ್ಮ ಹರಕೆಗಳನ್ನು ಖಂಡಿತವಾಗಿ ತೀರಿಸಿರಿ, ನೆರವೇರಿಸೇ ನೆರವೇರಿಸಿರಿ! 26 ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರುವುದಿಲ್ಲ ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ. 27 ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗ, ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು. 28 ಖಡ್ಗಕ್ಕೆ ತಪ್ಪಿಸಿಕೊಂಡವರು ಸ್ವಲ್ಪ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದದ ಉಳಿದ ಜನರೆಲ್ಲರೂ ನನ್ನ ಮಾತು ನಡೆಯುವುದೋ ಅಥವಾ ತಮ್ಮ ಮಾತು ನಡೆಯುವುದೋ ಎಂದು ತಿಳಿದುಕೊಳ್ಳುವರು. 29 ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನು ಎಂಬುದಕ್ಕೆ ಒಂದು ಗುರುತು ಕಾಣುವುದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನು ಉಂಟುಮಾಡುವೆನು ಎಂಬುದಾಗಿ ಅದರಿಂದಲೇ ನಿಮಗೆ ತಿಳಿದುಬರುವುದು. 30 ಅದೇನೆಂದರೆ, ಇಗೋ ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಪ್ರಾಣ ಹುಡುಕುತ್ತಿದ್ದ ಶತ್ರುವಾದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಕೈಗೆ ಕೊಟ್ಟಂತೆ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣ ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇದು ಯೆಹೋವನಾದ ನನ್ನ ನುಡಿ’ ” ಎಂಬುದೇ.
<- ಯೆರೆಮೀಯನು 43ಯೆರೆಮೀಯನು 45 ->