Link to home pageLanguagesLink to all Bible versions on this site

1 ಆಗ ಸಕಲ ಸೇನಾಧಿಪತಿಗಳು, ಕಾರೇಹನ ಮಗನಾದ ಯೋಹಾನಾನನೂ ಮತ್ತು ಹೋಷಾಯನ ಮಗನಾದ ಯೆಜನ್ಯನೂ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರೂ ಪ್ರವಾದಿಯಾದ ಯೆರೆಮೀಯನ ಬಳಿಗೆ ಬಂದರು. 2 ಅವರು ಅವನಿಗೆ, “ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ. 3 ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ, ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ವಿಜ್ಞಾಪಿಸಿದರು. 4 ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಿಮ್ಮ ಬಿನ್ನಹವನ್ನು ಕೇಳಿದೆನು; ಇಗೋ, ನಿಮ್ಮ ಮಾತಿನಂತೆ ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು; ಯೆಹೋವನು ಯಾವ ಉತ್ತರವನ್ನು ದಯಪಾಲಿಸುವನೋ ಒಂದನ್ನೂ ಬಚ್ಚಿಡದೆ ನಿಮಗೆ ತಿಳಿಸುವೆನು” ಎಂದು ಉತ್ತರಕೊಟ್ಟನು. 5 ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವನು ನಿನ್ನ ಮೂಲಕ ನಮಗೆ ಕಳುಹಿಸುವ ಮಾತಿನಂತೆ ನಾವು ನಡೆಯದಿದ್ದರೆ ಯೆಹೋವನು ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು ನಮ್ಮನ್ನು ಖಂಡಿಸಲಿ! 6 ನಮ್ಮ ದೇವರಾದ ಯೆಹೋವನ ಮಾತು ಹಿತವಾಗಲಿ ಅಥವಾ ಅಹಿತವಾಗಲಿ ಆತನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನಿನ್ನನ್ನು ಕಳುಹಿಸುವ ನಾವು ಅದನ್ನು ಕೈಕೊಳ್ಳುವೆವು; ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಿದರೆ ನಮಗೆ ಶುಭವಾಗುವುದು” ಎಂಬುದಾಗಿ ಹೇಳಿದರು.

7 ಹತ್ತು ದಿನಗಳಾದ ಮೇಲೆ ಯೆಹೋವನು ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು. 8 ಆಗ ಅವನು ಕಾರೇಹನ ಮಗನಾದ ಯೋಹಾನಾನನನ್ನೂ, ಅವನೊಂದಿಗಿದ್ದ ಸಕಲ ಸೇನಾಧಿಪತಿಗಳನ್ನೂ, ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರನ್ನೂ ಕರೆದು, 9 “ನಿಮ್ಮ ವಿಜ್ಞಾಪನೆಯನ್ನು ಯೆಹೋವನಿಗೆ ಅರಿಕೆಮಾಡುವುದಕ್ಕಾಗಿ ನನ್ನನ್ನು ಕಳುಹಿಸಿದ್ದಿರಲ್ಲಾ; ಅದಕ್ಕೆ ಇಸ್ರಾಯೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ, 10 ‘ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವುದಿಲ್ಲ; ನೆಡುವೆನು, ಕೀಳುವುದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ. 11 ನೀವು ಹೆದರಿರುವ ಬಾಬೆಲಿನ ಅರಸನಿಗೆ ಹೆದರಬೇಡಿರಿ, ಅವನಿಗೆ ಅಂಜದಿರಿ; ನಾನು ನಿಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಲಿಕ್ಕೆ ನಿಮ್ಮೊಂದಿಗಿದ್ದೇನಲ್ಲಾ. ಇದು ಯೆಹೋವನಾದ ನನ್ನ ನುಡಿ. 12 ಅವನು ನಿಮ್ಮನ್ನು ಕರುಣಿಸಿ ಸ್ವದೇಶಕ್ಕೆ ಹೋಗುವಂತೆ ನಾನು ನಿಮಗೆ ಕರುಣೆಯನ್ನು ಅನುಗ್ರಹಿಸುವೆನು’ ಎಂದೆನು. 13 ಆದರೆ ನೀವು ನಿಮ್ಮ ದೇವರಾದ ಯೆಹೋವನ ನುಡಿಗೆ ಕಿವಿಗೊಡದೆ ‘ಈ ದೇಶದಲ್ಲಿ ನಾವು ನೆಲೆಸುವುದೇ ಇಲ್ಲ; 14 ಬೇಡವೇ ಬೇಡ; ನಾವು ಯುದ್ಧ ಕಾಣದೆ, ತುತ್ತೂರಿಯ ಶಬ್ದ ಕೇಳದೆ, ಅನ್ನದ ಕೊರತೆಯಿಂದ ಹಸಿವಾಗದೆ ಇರುವ ಐಗುಪ್ತ ದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು’ ಎಂದುಕೊಂಡರೆ, 15 ಯೆಹೂದ್ಯರಲ್ಲಿ ಉಳಿದವರೇ, ಯೆಹೋವನ ವಾಕ್ಯವನ್ನು ಈಗ ಕೇಳಿರಿ, ‘ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀವು ಐಗುಪ್ತಕ್ಕೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವುದಾದರೆ, 16 ಆಗ ನೀವು ಹೆದರುತ್ತಿರುವ ಖಡ್ಗವು ಐಗುಪ್ತದಲ್ಲಿಯೂ ನಿಮ್ಮನ್ನು ಹಿಂದಟ್ಟಿ ಹಿಡಿಯುವುದು, ನೀವು ಅಂಜುತ್ತಿರುವ ಕ್ಷಾಮವು ಅಲ್ಲಿಯೂ ನಿಮ್ಮ ಬೆನ್ನ ಹತ್ತುವುದು; ಅಲ್ಲೇ ಸಾಯುವಿರಿ. 17 ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸಲು ಹಟಹಿಡಿಯುವ ಎಲ್ಲಾ ಜನರಿಗೂ ಇದೇ ಗತಿಯಾಗುವುದು; ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವರು. ನಾನು ಅವರಿಗೆ ಬರಮಾಡುವ ವಿಪತ್ತಿನಿಂದ ಯಾರೂ ತಪ್ಪಿಸಿಕೊಳ್ಳರು, ಯಾರೂ ಉಳಿಯರು. 18 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನನ್ನ ಉಗ್ರರೋಷಾಗ್ನಿಯು ಯೆರೂಸಲೇಮಿನವರ ಮೇಲೆ ಹೇಗೆ ಸುರಿಯಿತೋ ಹಾಗೆಯೇ ನೀವು ಐಗುಪ್ತದಲ್ಲಿ ಕಾಲಿಟ್ಟ ಕೂಡಲೆ ನನ್ನ ರೋಷಾಗ್ನಿಯು ನಿಮ್ಮ ಮೇಲೆಯೂ ಸುರಿಯುವುದು; ನೀವು ಅಪವಾದ, ವಿಸ್ಮಯ, ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ; ಈ ಸ್ಥಳವು ಮತ್ತೆ ನಿಮ್ಮ ಕಣ್ಣಿಗೆ ಬೀಳದು.’ ”

ಯೆರೆಮೀಯನು ಜನರನ್ನು ಎಚ್ಚರಿಸಿದ್ದು
19 “ಯೆಹೂದ್ಯರಲ್ಲಿ ಉಳಿದವರೇ, ಯೆಹೋವನು ನಿಮ್ಮನ್ನು ಕುರಿತು, ‘ಐಗುಪ್ತಕ್ಕೆ ಹೋಗಬೇಡಿರಿ’ ಎಂದು ಅಪ್ಪಣೆಮಾಡಿದ್ದಾನೆ; ನಾನು ಈ ದಿನ ಆ ಮಾತನ್ನು ನಿಮಗೆ ಪ್ರಕಟಿಸಿದ್ದೇನೆ, ಚೆನ್ನಾಗಿ ತಿಳಿದಿರಲಿ. 20 ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು, ‘ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆ ಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು’ ಎಂಬುದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ. 21 ನಾನು ಯೆಹೋವನ ಅಪ್ಪಣೆಯನ್ನು ಈ ದಿನ ನಿಮಗೆ ತಿಳಿಸಿದ್ದೇನೆ; ನೀವಾದರೆ ನಿಮ್ಮ ದೇವರಾದ ಯೆಹೋವನು ನನ್ನ ಮೂಲಕ ನಿಮಗೆ ಹೇಳಿ ಕಳುಹಿಸಿದ ಯಾವ ಮಾತನ್ನೂ ಕೇಳಲಿಲ್ಲ. 22 ನೀವು ಯಾವ ಸ್ಥಳದಲ್ಲಿ ವಾಸಮಾಡಲು ಅಪೇಕ್ಷಿಸಿ ಹೋಗುತ್ತೀರೋ ಆ ಸ್ಥಳದಲ್ಲೇ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವಿರಿ ಎಂದು ಖಂಡಿತವಾಗಿ ತಿಳಿಯಿರಿ” ಎಂದು ಹೇಳಿದನು.

<- ಯೆರೆಮೀಯನು 41ಯೆರೆಮೀಯನು 43 ->