16 ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು. 17 ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು 18 ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ. 19 ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ, ದ್ರಾಕ್ಷಾರಸವೂ ಇರುತ್ತವೆ. ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ” ಎಂದು ಹೇಳಿದನು. 20 ಆಗ ಆ ಮುದುಕನು, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ; 21 ಈ ರಾತ್ರಿಯನ್ನು ಬೀದಿಯಲ್ಲಿ ಕಳೆಯಬೇಡ, ನನ್ನ ಮನೆಗೆ ಬಾ” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಕತ್ತೆಗಳಿಗೆ ಮೇವು ಕೊಟ್ಟನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿ ಅನ್ನಪಾನಗಳನ್ನು ತೆಗೆದುಕೊಂಡರು.
22 ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ದುಷ್ಟ ಜನರು ಬಂದು ಆ ಮನೆಯನ್ನು ಸುತ್ತಿಕೊಂಡು, ಬಾಗಿಲನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ; ಅವನೊಡನೆ ನಾವು ಸಂಗಮಿಸಬೇಕು” ಎಂದು ಕೂಗಿದರು. 23 ಆಗ ಆ ಮುದುಕನು ಹೊರಗೆ ಹೋಗಿ ಅವರಿಗೆ, “ಸಹೋದರರೇ, ಇಂಥ ದುಷ್ಟತನವನ್ನು ನಡೆಸಬೇಡಿರಿ; ಅವನು ಆಶ್ರಯಕ್ಕಾಗಿ ನನ್ನ ಮನೆಗೆ ಬಂದಿದ್ದಾನೆ; ನೀವು ಇಂಥ ಹುಚ್ಚುತನವನ್ನು ಮಾಡಬೇಡಿರಿ. 24 ಇನ್ನೂ ಮದುವೆಯಾಗದೆ ಇರುವ ನನ್ನ ಮಗಳನ್ನೂ, ಅವನ ಉಪಪತ್ನಿಯನ್ನೂ ಹೊರಗೆ ತರುತ್ತೇನೆ; ಅವರನ್ನು ಭಂಗಪಡಿಸಿರಿ; ನಿಮ್ಮ ಮನಸ್ಸಿಗೆ ಬಂದ ಹಾಗೆ ಅವರಿಗೆ ಮಾಡಿರಿ. ಈ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ” ಅಂದನು. 25 ಆದರೆ ಅವರು ಆ ಮುದುಕನಿಗೆ ಕಿವಿಗೊಡದೆ ಹೋದುದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹೊರಗೆ ಅವರ ಬಳಿಗೆ ಕಳುಹಿಸಿಬಿಟ್ಟನು. ಅವರು ಆಕೆಯನ್ನು ಕೆಡಿಸಿ, ರಾತ್ರಿಯೆಲ್ಲಾ ಬಹುಕ್ರೂರತನದಿಂದ ವರ್ತಿಸಿ, ಬೆಳಗಾಗುವಾಗ ಆಕೆಯನ್ನು ಬಿಟ್ಟುಹೋದರು. 26 ಆ ಸ್ತ್ರೀಯು ಸೂರ್ಯೋದಯಕ್ಕೆ ಮುಂಚೆಯೇ ಬಂದು ತನ್ನ ಯಜಮಾನನು ಇಳಿದುಕೊಂಡಿದ್ದ ಮನೆಯ ಬಾಗಿಲಲ್ಲಿ ಬಂದು ಬಿದ್ದವಳು ಬೆಳಗಾದರೂ ಏಳಲೇ ಇಲ್ಲ. 27 ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು. 28 ಅವನು, “ಏಳು, ಹೋಗೋಣ” ಎಂದು ಆಕೆಯನ್ನು ಕರೆಯಲು ಪ್ರತ್ಯುತ್ತರವೇ ಇಲ್ಲ. ಆಗ ಅವನು ಆಕೆಯ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಮನೆಗೆ ಹೋದನು.
29 ಅವನು ತನ್ನ ಮನೆಗೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು, ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ, ಅವುಗಳನ್ನು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು. 30 ಅವುಗಳನ್ನು ಕಂಡವರೆಲ್ಲರೂ, “ಇಸ್ರಾಯೇಲರು ಐಗುಪ್ತವನ್ನು ಬಿಟ್ಟು ಬಂದ ದಿನದಿಂದ ಈ ದಿನದವರೆಗೆ ಇಂಥ ಕೃತ್ಯವು ನಡೆಯಲೇ ಇಲ್ಲ, ನಾವು ಅದನ್ನು ನೋಡಿಯೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು” ಅಂದುಕೊಂಡರು.
<- ನ್ಯಾಯಸ್ಥಾಪಕರು 18ನ್ಯಾಯಸ್ಥಾಪಕರು 20 ->