Link to home pageLanguagesLink to all Bible versions on this site
5
ಐಶ್ವರ್ಯವಂತರ ನಡತೆಯ ಬಗ್ಗೆ ಎಚ್ಚರಿಕೆ
1 ಐಶ್ವರ್ಯವಂತರೇ, [a]ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ. 2 [b]ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. 3 ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. [c]ಅಂತ್ಯಕಾಲ ಬಂದರೂ ಸಂಪತ್ತನ್ನು [d]ಕೂಡಿಸಿ ಇಟ್ಟುಕೊಂಡಿದ್ದೀರಿ. 4 ಇಗೋ, [e]ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು[f] ಪೈರು ಕೊಯ್ದದವರ ಕೂಗು [g]ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ. 5 ಭೂಲೋಕದಲ್ಲಿ ನೀವು [h]ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀವು ನೀತಿವಂತನನ್ನು ಖಂಡಿಸಿ [i]ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ.
ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು
7 ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು [j]ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು. 8 ನೀವೂ ತಾಳ್ಮೆಯಿಂದಿರಿ, [k]ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ [l]ಕರ್ತನ ಬರೋಣವು ಹತ್ತಿರವಾಯಿತು. 9 ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆ ಮಾಡಬೇಡಿರಿ; ಇದರಿಂದ [m]ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, [n]ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ. 10 ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ [o]ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. 11 ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು [p]ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ [q]ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ [r]ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.
ನಂಬಿಕೆಯ ಪ್ರಾರ್ಥನೆ ಕುರಿತದ್ದು
12 ಮುಖ್ಯವಾಗಿ ನನ್ನ ಸಹೋದರರೇ, [s]ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. 13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, [t]ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ. 14 ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ [u]ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ [v]ಪಾಪಗಳನ್ನು ಕ್ಷಮಿಸುವನು. 16 ಹೀಗಿರಲು ನೀವು ಸ್ವಸ್ಥವಾಗಬೇಕಾದರೆ [w]ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. [x]ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ. 17 ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, [y]ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು [z]ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. 18 ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು.

19 ನನ್ನ ಸಹೋದರರೇ, [aa]ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ [bb]ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; 20 ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ [cc]ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.

<- ಯಾಕೋಬನು 4