1 ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡು. ಏಕೆಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದು ಹೇಳಿದನು. 2 ಇದನ್ನು ಕೇಳಿದೊಡನೆ ಹಿಜ್ಕೀಯನು ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನನ್ನು ಪ್ರಾರ್ಥಿಸಿದನು. 3 ಹಿಜ್ಕೀಯನು, “ಯೆಹೋವನೇ, ನಾನು ನಂಬಿಗಸ್ತನಾಗಿಯೂ, ಯಥಾರ್ಥಚಿತ್ತನಾಗಿಯೂ ನಿನಗೆ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನ್ನು ನೆನಪುಮಾಡಿಕೋ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.
4 ಆಗ ಯೆಹೋವನು ಯೆಶಾಯನಿಗೆ, 5 “ನೀನು ಹೋಗಿ ನನ್ನ ಪ್ರಜೆಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ದಾವೀದನ ಪೂರ್ವಿಕರಾದ ಯೆಹೋವನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. 6 ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುವೆನು, ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು. 7 ಯೆಹೋವನು ನುಡಿದದ್ದನ್ನು ನೆರವೇರಿಸುವನು ಎಂಬುದಕ್ಕೆ ಒಂದು ಗುರುತನ್ನು ಕಾಣುವಿ. 8 ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡುವೆನು’ ಎಂದು ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬುದಾಗಿ ತಿಳಿಸು” ಎಂದು ಆಜ್ಞಾಪಿಸಿದನು. ಅದರಂತೆ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂತು.
9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಆರೋಗ್ಯವನ್ನು ಹೊಂದಿದ ನಂತರ ಬರೆದದ್ದು.
10 ನನ್ನ ರೋಗದಲ್ಲಿ ಹೀಗೆಲ್ಲಾ ಅಂದುಕೊಂಡೆನು,
“ನನ್ನ ಮಧ್ಯಪ್ರಾಯದಲ್ಲಿ ಪಾತಾಳ ದ್ವಾರಗಳೊಳಗೆ ಸೇರಿದ್ದೇನೆ, ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರ್ಷಗಳು ನನಗೆ ನಷ್ಟವಾದವು.
11 ನಾನು ಇನ್ನು ಜೀವಲೋಕದವನಾಗಿ ಯೆಹೋವನ ದರ್ಶನವನ್ನು ಹೊಂದಿದೆನಲ್ಲಾ,
ಇನ್ನು ಭೂಲೋಕ ನಿವಾಸಿಗಳಲ್ಲಿ ಒಬ್ಬನಾಗಿ ಮನುಷ್ಯರನ್ನು ದೃಷ್ಟಿಸಲಾರೆನು.
12 ನನ್ನ ಆಶ್ರಯವು ಕುರುಬನ ಗುಡಾರದಂತೆ ಕಿತ್ತು, ನನ್ನ ಕಡೆಯಿಂದ ಒಯ್ಯಲ್ಪಟ್ಟಿದೆ.