30
ಐಗುಪ್ತರೊಡನೆ ಸಂಧಾನ ವ್ಯರ್ಥ
1 ಯೆಹೋವನು ಹೀಗೆ ನುಡಿಯುತ್ತಾನೆ, “ದ್ರೋಹಿಗಳಾದ ನನ್ನ ಮಕ್ಕಳ ಗತಿಯನ್ನು ಏನು ಹೇಳಲಿ”
“ಇವರು ನನ್ನನ್ನು ಕೇಳದೆ ಒಂದು ಆಲೋಚನೆಯನ್ನು ಮಾಡಿ, ನನ್ನ ಆತ್ಮದಿಂದ ಪ್ರೇರಿತರಾಗದೆ ಕಪಟ ಉಪಾಯಗಳನ್ನು ಮಾಡಿ
ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
2 ಫರೋಹನ ಆಶ್ರಯವನ್ನು ಪಡೆದು, ಐಗುಪ್ತವನ್ನು ಆಶ್ರಯ ಮಾಡಿಕೊಳ್ಳಬೇಕೆಂದು,
ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿದ್ದಾರೆ.
3 ಆದುದರಿಂದ ಫರೋಹನ ಆಶ್ರಯದಿಂದ ನಿಮಗೆ ನಾಚಿಕೆಯು,
ಐಗುಪ್ತವನ್ನು ಆಶ್ರಯಿಸುವುದರಿಂದ ಅವಮಾನವು ಉಂಟಾಗುವುದು.
4 ಆ ಫರೋಹನ ಪ್ರಧಾನರು ಚೋವನಿನಲ್ಲಿದ್ದರೂ, ಅವನ ದೂತರು ಹಾನೇಸಿಗೆ ಬಂದಿದ್ದಾರೆ.
5 ತಮಗೆ ಸಹಾಯವನ್ನೂ, ಪ್ರಯೋಜನವನ್ನೂ ಮಾಡಲಾರದೆ ನಾಚಿಕೆಯನ್ನೂ,
ಅವಮಾನವನ್ನೂ ಉಂಟುಮಾಡುವ ವ್ಯರ್ಥವಾದ ಈ ಜನಾಂಗದ ವಿಷಯವಾಗಿ ಎಲ್ಲರೂ ಲಜ್ಜೆಪಡುವರು.”
6 ದಕ್ಷಿಣ ಸೀಮೆಯ*ದಕ್ಷಿಣ ಸೀಮೆಯ ನೆಗೆವ್. ನೀರಾನೆಯ ವಿಷಯವಾದ ದೈವೋಕ್ತಿ.
ರಾಯಭಾರಿಗಳು ಗಂಡು ಕತ್ತೆಗಳ ಬೆನ್ನುಗಳ ಮೇಲೆ ತಮ್ಮ ಧನವನ್ನೂ, ಒಂಟೆಗಳ ಡುಬ್ಬಗಳ ಮೇಲೆ ತಮ್ಮ ದ್ರವ್ಯವನ್ನೂ ಹೊರಿಸಿಕೊಂಡು,
ಮೃಗೇಂದ್ರ, ಸಿಂಹ, ಸರ್ಪ, ಹಾರುವ ಉರಿಮಂಡಲ ಇವುಗಳಿಂದ ಭಯಂಕರವಾಗಿಯೂ, ಶ್ರಮಸಂಕಟಗಳನ್ನು ಉಂಟು ಮಾಡುವ ದೇಶದ ಮಾರ್ಗವಾಗಿ
ನಿಷ್ಪ್ರಯೋಜಕವಾದ ಜನಾಂಗದ ಬಳಿಗೆ ಹೋಗುತ್ತಾರೆ.
7 ಐಗುಪ್ತದ ಸಹಾಯವು ವ್ಯರ್ಥ ನಿರರ್ಥಕ;
ಆದುದರಿಂದ ನಾನು ಅದಕ್ಕೆ ಸುಮ್ಮನೆ ಬಿದ್ದಿರುವ ಜಂಬದ ಮೃಗವೆಂದು ಹೆಸರಿಟ್ಟಿದ್ದೇನೆ.
ಐಗುಪ್ತದ ಆಶ್ರಯದಿಂದಾಗುವ ದುರ್ಗತಿ
8 ಯೆಹೋವನು ನನಗೆ ಹೀಗೆ ಹೇಳಿದನು ನೀನು ಈಗ ಹೋಗಿ, ಈ ಮಾತುಗಳು ಶಾಶ್ವತವಾಗಿರುವಂತೆ ಅವರೆದುರು ಹಲಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ,
ಈ ಮಾತು ಮುಂದಿನ ದಿನಗಳಲ್ಲಿ ಶಾಶ್ವತ ಸಾಕ್ಷಿಯಾಗಿರುವುದು.
9 ಇವರು ದ್ರೋಹದ ಜನಾಂಗದವರು, ಮೋಸದ ಸಂತಾನದವರು,
ಯೆಹೋವನ ಉಪದೇಶವನ್ನು ಕೇಳಲೊಲ್ಲದ ಸಂತತಿಯವರು.
10 ಇವರು ದಿವ್ಯದರ್ಶಿಗಳಿಗೆ, “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ,
ಮತ್ತು ಪ್ರವಾದಿಗಳಿಗೆ, “ನಮಗಾಗಿ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ,
ನಯವಾದವುಗಳನ್ನು ನಮಗೆ ನುಡಿಯಿರಿ, ಮೋಸವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.
11 ನೀವು ಹಿಡಿದಿರುವ ಮಾರ್ಗದಿಂದ ತೊಲಗಿರಿ; ನಿಮ್ಮ ದಾರಿಗೆ ಓರೆಯಾಗಿರಿ;
ಇಸ್ರಾಯೇಲರ ಸದಮಲಸ್ವಾಮಿಯನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ” ಎಂದು ಹೇಳುತ್ತಾರೆ.
12 ಆದುದರಿಂದ ಇಸ್ರಾಯೇಲರ ಸದಮಲಸ್ವಾಮಿಯು ಹೀಗೆನ್ನುತ್ತಾನೆ,
“ನೀವು ಈ ನನ್ನ ಮಾತನ್ನು ಅಸಡ್ಡೆಮಾಡಿ,
ಬಲಾತ್ಕಾರ ಕುಯುಕ್ತಿಗಳನ್ನು ನಂಬಿ,
13 ಅವುಗಳನ್ನೇ ಆಧಾರ ಮಾಡಿಕೊಂಡಿದ್ದರಿಂದ ಎತ್ತರವಾದ ಗೋಡೆಯ ಒಂದು ಭಾಗವು ಬಾಗುತ್ತಾ,
ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿಕೊಳ್ಳುವ ಹಾಗೆ,
ನಿಮ್ಮ ಅಪರಾಧವೂ ನಿಮಗೆ ಅಪಾಯಕರವಾಗುವುದು.”
14 ಉರಿಯಿಂದ ಕೆಂಡವನ್ನು ತೆಗೆಯುವುದಕ್ಕಾಗಲಿ, ಬಾವಿಯಿಂದ ನೀರನ್ನು ತೆಗೆಯುವುದಕ್ಕಾಗಲಿ,
ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ,
ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ನಾಶಮಾಡುವನು.
15 ಇಸ್ರಾಯೇಲರ ಸದಮಲಸ್ವಾಮಿಯಾಗಿರುವ ಕರ್ತನಾದ ಯೆಹೋವನು,
“ನೀವು ಪರಿವರ್ತನೆಗೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು; ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ,
ನೀವು ಒಪ್ಪಿಕೊಂಡಿಲ್ಲ.
16 ನೀವು, ‘ಬೇಡವೇ ಬೇಡ,
ಕುದುರೆಗಳ ಮೇಲೆ ಓಡುವೆವು’ ಎಂದುಕೊಂಡಿದ್ದರಿಂದ ನೀವು ಓಡಿಯೇ ಹೋಗುವಿರಿ,
ನೀವು, ‘ವೇಗವಾಗಿ ಸವಾರಿ ಮಾಡುವೆವು’ ಎಂದುಕೊಂಡಿದ್ದರಿಂದ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.
17 ಒಬ್ಬನ ಬೆದರಿಕೆಗೆ ಒಂದು ಸಾವಿರ ಜನರು ಓಡುವರು;
ಐವರು ಬೆದರಿಸುವುದರಿಂದ ನೀವು ಓಡಿಹೋಗುವಿರಿ;
ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಿನ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”
ಯೆಹೂದ್ಯರ ಮುಂದಿನ ವಿಧೇಯತೆ ಮತ್ತು ಸುಸ್ಥಿತಿಯೂ
18 ಹೀಗಿರಲು ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು;
ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
19 ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳುವುದೇ ಇಲ್ಲ; ನೀವು ಕೂಗಿ ದುಃಖಿಸಿದ ಶಬ್ದವನ್ನು ಆತನು ಕೇಳಿ,
ನಿಮಗೆ ಕೃಪೆ ತೋರಿಸೇ ತೋರಿಸುವನು; ಕೇಳಿದ ಕೂಡಲೆ ನಿಮಗೆ ಸದುತ್ತರವನ್ನು ದಯಪಾಲಿಸುವನು.
20 ಕರ್ತನು ಕಷ್ಟವನ್ನು, ಶ್ರಮೆಯನ್ನು ನಿಮಗೆ ಅನ್ನಪಾನಗಳನ್ನಾಗಿ ಕೊಟ್ಟರೂ,
ನಿಮ್ಮ ಬೋಧಕನು ಇನ್ನು ಮರೆಯಾಗಿರನು,
ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ.
21 ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ,
“ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.
22 ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ,
ಎರಕದ ನಿಮ್ಮ ಬೊಂಬೆಗಳ ಬಂಗಾರದ ಹೊದಿಕೆಯನ್ನು ನೀವು ಹೊಲಸುಮಾಡಿ ಆ ವಿಗ್ರಹಗಳನ್ನು, “ತೊಲಗಿ ಹೋಗಿರಿ” ಎಂದು ಹೊಲೆಯಾದ ಬಟ್ಟೆಯಂತೆ ಬಿಸಾಡುವಿರಿ.
23 ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಆತನು ಬಿತ್ತನೆಯ ಮಳೆಯನ್ನು ದಯಪಾಲಿಸುವನು;
ನೆಲದ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವನು;
ಆ ದಿನದಲ್ಲಿ ನಿಮ್ಮ ಮಂದೆಗಳು ದೊಡ್ಡ ದೊಡ್ಡ ಕಾವಲುಗಳಲ್ಲಿ ಮೇಯುವವು.
24 ಹೊಲವನ್ನು ಊಳುವ ಎತ್ತು, ಗಂಡು ಕತ್ತೆಗಳು ಮೊರದಿಂದಲೂ,
ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವವು.
25 ಗೋಪುರಗಳು ಬಿದ್ದು ಹೋಗುವ ಮಹಾಸಂಹಾರದ ದಿನದಲ್ಲಿ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ,
ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು, ನೀರಿನ ಕಾಲುವೆಗಳು ಹರಿಯುತ್ತಿರುವವು.
26 ಇದಲ್ಲದೆ, ಯೆಹೋವನು ತನ್ನ ಜನರ ವ್ರಣವನ್ನು ಕಟ್ಟಿ,
ಅವರ ಪೆಟ್ಟಿನ ಗಾಯವನ್ನು ಗುಣ ಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಪ್ರಕಾಶಮಾನವಾಗಿತ್ತು.
ಯೆಹೋವನಿಂದ ಅಶ್ಶೂರ್ಯರಿಗಾದ ವಿನಾಶ
27 ಇಗೋ, ಯೆಹೋವನ ನಾಮವು ದೂರದಿಂದ ಬರುತ್ತದೆ; ಆತನ ಕೋಪವು ಬೆಂಕಿಯಂತೆ ಉರಿಯುತ್ತದೆ, ಅದರಿಂದೇಳುವ ಹೊಗೆಯು ದಟ್ಟವಾಗಿದೆ;
ಆತನ ತುಟಿಗಳು ರೋಷದಿಂದ ತುಂಬಿವೆ, ಆತನ ನಾಲಿಗೆಯು ನುಂಗುವ ಅಗ್ನಿಯಂತಿದೆ.
28 ಆತನ ಶ್ವಾಸವು ತುಂಬಿ ತುಳುಕಿ ಕಂಠದವರೆಗೂ ಏರುವ ತೊರೆಯಂತಿದೆ.
ಜನಾಂಗಗಳನ್ನೂ ಸ್ವಲ್ಪವೂ ಉಳಿಸದೆ ಜರಡಿಯಿಂದ ಜಾಲಿಸುವುದಕ್ಕೆ ಬರುತ್ತಾನೆ. ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆಗಳಲ್ಲಿರುವುದು.
29 ನೀವೋ, ಹಬ್ಬದ ಸೌರಣೆಯ ರಾತ್ರಿಯಲ್ಲೋ ಎಂಬಂತೆ ಹಾಡುವಿರಿ.
ಇಸ್ರಾಯೇಲರ ಶರಣನ ಸಾನ್ನಿಧ್ಯವನ್ನು ಬಯಸಿ, ಯೆಹೋವನ ಪರ್ವತಕ್ಕೆ ಕೊಳಲಿನ ನಾದದೊಡನೆ ಹೋಗುವವನಂತೆ ಹೃದಯಾನಂದಪಡುವಿರಿ.
30 ಆಗ ಯೆಹೋವನು ತನ್ನ ಗಂಭೀರವಾದ ಧ್ವನಿಯನ್ನು ಕೇಳಮಾಡಿ,
ತೀವ್ರಕೋಪ, ಕಬಳಿಸುವ ಅಗ್ನಿಜ್ವಾಲೆ, ಬಿರುಗಾಳಿ, ಅತಿವೃಷ್ಟಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿಸುವನು.
31 ಹೀಗೆ ಯೆಹೋವನು ದಂಡದಿಂದ ದಂಡಿಸುವಾಗ ಅಶ್ಶೂರ್ಯರು ಆತನ ಧ್ವನಿಯಿಂದಲೇ ನಾಶವಾಗುವರು.
32 ಮತ್ತು ಯೆಹೋವನು ಸಂಕಲ್ಪಿಸಿದ ದಂಡದ ಪ್ರತಿಯೊಂದು ಪೆಟ್ಟು,
ದಮ್ಮಡಿ, ಕಿನ್ನರಿಗಳ ನಾದದೊಡನೆ ಅವರ ಮೇಲೆ ಬೀಳುವುದು. ಆತನು ಅವರೊಂದಿಗೆ ಹೋರಾಡುತ್ತಾ ಯುದ್ಧಮಾಡುವನು.
33 ಪುರಾತನ ಕಾಲದಿಂದಲೂ ಅಗ್ನಿಕುಂಡವು ಸಿದ್ಧವಾಗಿದೆ. ಹೌದು, ರಾಜನಿಗೆ ಅದು ಸಿದ್ಧವಾಗಿದೆ. ಅದನ್ನು ಆಳವಾಗಿಯೂ, ಅಗಲವಾಗಿಯೂ ಮಾಡಿದ್ದಾನೆ.
ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಬೇಕಾದಷ್ಟು ಮರದಕೊರಡುಗಳೂ ಇವೆ;