Link to home pageLanguagesLink to all Bible versions on this site
27
1 ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ
ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ,
ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು.
ಯೆಹೋವನ ದ್ರಾಕ್ಷಿ ತೋಟದ ಗೀತೆ
2 ಆ ದಿನದಲ್ಲಿ ಫಲಭರಿತ ದ್ರಾಕ್ಷಿಯ ತೋಟದ ವಿಷಯವಾಗಿ ಹಾಡಿರಿ,
3 “ಯೆಹೋವನಾದ ನಾನೇ ಅದನ್ನು ಕಾಯುತ್ತೇನೆ. ಪ್ರತಿ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ;
ಯಾರೂ ಅದಕ್ಕೆ ಕೇಡು ಮಾಡದ ಹಾಗೆ ಹಗಲಿರುಳೂ ಕಾಯುತ್ತೇನೆ.
4 ರೌದ್ರವು ನನ್ನಲ್ಲಿಲ್ಲ; ದತ್ತೂರಿ ಮತ್ತು ಮುಳ್ಳು ನನಗೆ ಎದುರುಬಿದ್ದರೆ,
ಅವುಗಳಿಗೆ ವಿರುದ್ಧವಾಗಿ ಯುದ್ಧಮಾಡಿ, ಒಟ್ಟಿಗೆ ಸುಟ್ಟುಬಿಡುವೆನು.
5 ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನ ಸಂಗಡ ಸಮಾಧಾನ ಮಾಡಿಕೊಳ್ಳಲಿ.
6 ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು, ಇಸ್ರಾಯೇಲು ಹೂಬಿಟ್ಟು ಚಿಗುರುವುದು,
ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವುದು.”
ಯೆಹೋವನು ಇಸ್ರಾಯೇಲನ್ನು ಶಿಕ್ಷಿಸುವುದು
7 ಯೆಹೋವನು ಬೇರೆ ದೇಶಗಳನ್ನು ಹೊಡೆದಂತೆ ತನ್ನ ಪ್ರಜೆಯಾದ ಯಾಕೋಬ ಮತ್ತು ಇಸ್ರಾಯೇಲರನ್ನು ಹೊಡೆದನೋ? ಇತರ ದೇಶದವರು ಸಂಹರಿಸಲ್ಪಟ್ಟಂತೆ ಯಾಕೋಬ ಮತ್ತು ಇಸ್ರಾಯೇಲರು ಸಂಹರಿಸಲ್ಪಟ್ಟರೋ?
8 ನಿನ್ನ ಪ್ರಜೆಯನ್ನು ಕಳುಹಿಸಿಬಿಡುವದರ ಮೂಲಕ ಅದರೊಡನೆ ಮಿತಿಮೀರದೆ ಹೋರಾಡುತ್ತಿದ್ದೀ[a]; ಮೂಡಣದಿಂದ ಗಾಳಿಯು ಬೀಸುವ ದಿನದಲ್ಲಿ ಅದರ ಕ್ರೂರ ಹೊಡೆತದಿಂದ ನಿನ್ನ ಜನರನ್ನು ಹೊರಗೆ ಕಳುಹಿಸಿದೆ.
9 ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿ ಮಾಡಿ,
ಅಶೇರವೆಂಬ ವಿಗ್ರಹಸ್ತಂಭಗಳನ್ನೂ, ಸೂರ್ಯಸ್ತಂಭಗಳನ್ನೂ ಪ್ರತಿಷ್ಠಿಸದೆ ನಾಶಮಾಡಿ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವಂತೆ ಮಾಡಿದನು
ಮತ್ತು ಅವರ ಪಾಪ ಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದಾಗಿದೆ.
10 ಕೋಟೆಕೊತ್ತಲದ ಪಟ್ಟಣವು ಹಾಳಾಗಿ, ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗಿದೆ;
ಅಲ್ಲಿ ಕರುಗಳು ಮೇದು ಮಲಗುವುದು, ಅಲ್ಲಿನ ಚಿಗುರುಗಳನ್ನು ತಿಂದುಬಿಡುವುದು.
11 ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿದುಹೋಗುವವು, ಹೆಂಗಸರು ಬಂದು ಅವುಗಳಿಗೆ ಬೆಂಕಿ ಹಚ್ಚಿ ಉರಿಸುವರು.
ಏಕೆಂದರೆ ಆ ಪ್ರಜೆಯು ಬುದ್ಧಿಹೀನವಾದವರೇ. ಆದಕಾರಣ ಸೃಷ್ಟಿಸಿದಾತನು ಅವರಿಗೆ ಕರುಣೆ ತೋರಿಸುವುದಿಲ್ಲ, ನಿರ್ಮಿಸಿದಾತನು ಅವರಿಗೆ ದಯೆತೋರಿಸುವುದಿಲ್ಲ.
ಇಸ್ರಾಯೇಲರ ಪುನರಾಗಮನ
12 ಇಸ್ರಾಯೇಲರೇ, ತುಂಬಿತುಳುಕುವ ಯೂಫ್ರೆಟಿಸ್ ನದಿಯಿಂದ ಐಗುಪ್ತ ದೇಶದ ನದಿಯವರೆಗೆ
ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ;
ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಆರಿಸುವನು.
13 ಆ ದಿನದಲ್ಲಿ ದೊಡ್ಡ ಕೊಂಬನ್ನೂದಲು
ಅಶ್ಶೂರ ದೇಶದಲ್ಲಿ ಹಾಳಾದವರೂ, ಐಗುಪ್ತದಲ್ಲಿ ದೇಶಭ್ರಷ್ಟರಾದವರೂ ಬಂದು
ಪರಿಶುದ್ಧ ಪರ್ವತವಾದ ಯೆರೂಸಲೇಮಿನಲ್ಲಿ ಯೆಹೋವನನ್ನು ಆರಾಧಿಸುವರು.

<- ಯೆಶಾಯನು 26ಯೆಶಾಯನು 28 ->