14 ಯೆಹೋವನು ಅವರ ಅಂತರಾತ್ಮದಲ್ಲಿ ವಕ್ರಬುದ್ಧಿಯನ್ನು ಕಲ್ಪಸಿದ್ದಾನೆ.
ಅಮಲೇರಿದವನು ಕಕ್ಕುತ್ತಾ ಓಡಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
15 ಐಗುಪ್ತದಲ್ಲಿ ತಲೆಯಾಗಲಿ, ಬಾಲವಾಗಲಿ, ಖರ್ಜೂರದ ಕೊಂಬೆಯಾಗಲಿ ಅಥವಾ ಹುಲ್ಲಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
16 ಆ ದಿನದಲ್ಲಿ, ಐಗುಪ್ತ್ಯರು ಅಶ್ರಯವಿಲ್ಲದ ಹೆಂಗಸರ ಹಾಗೆ ಭಯಗ್ರಸ್ತರಾಗಿರುವರು. ಸೇನಾಧೀಶ್ವರನಾದ ಯೆಹೋವನು ಅವರ ಮೇಲೆ ತನ್ನ ಕೈಯನ್ನು ಬೀಸುತ್ತಿರುವುದರಿಂದ ಅವರು ಭಯಪಟ್ಟು ನಡುಗುವರು. 17 ಐಗುಪ್ತವು ಬೆಚ್ಚಿಬೀಳುವುದಕ್ಕೆ ಯೆಹೂದ ದೇಶವೇ ಕಾರಣವಾಗುವುದು. ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು.
18 ಆ ದಿನದಲ್ಲಿ, ಸೇನಾಧೀಶ್ವರನಾದ ಯೆಹೋವನ ಭಕ್ತರೆಂದು ಪ್ರಮಾಣಮಾಡಿ, ಕಾನಾನಿನ ಭಾಷೆಯನ್ನು ಆಡುವವರಿಂದ ತುಂಬಿದ ಐದು ಪಟ್ಟಣಗಳು ಐಗುಪ್ತ ದೇಶದಲ್ಲಿರುವವು. ಇವುಗಳಲ್ಲಿ ಒಂದರ ಹೆಸರು “ನಾಶಪುರ.”
19 ಅ ದಿನದಲ್ಲಿ ಐಗುಪ್ತ ದೇಶದ ಮಧ್ಯದಲ್ಲಿ ಯೆಹೋವನಿಗೆ ಒಂದು ಯಜ್ಞಪೀಠವು, ದೇಶದ ಮೇರೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವುದು. 20 ಅವು ಐಗುಪ್ತ ದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ, ಸಾಕ್ಷಿಯಾಗಿಯೂ ಇರುವವು. ಹಿಂಸಕರ ದೆಸೆಯಿಂದ ಯೆಹೋವನನ್ನು ಕೂಗಿಕೊಳ್ಳಲು ಆತನು ಅವರಿಗಾಗಿ ಹೋರಾಡುವ ಶೂರನಾದ ರಕ್ಷಕನನ್ನು ಕಳುಹಿಸಿ ಅವರನ್ನು ಬಿಡುಗಡೆ ಮಾಡುವನು.
21 ಯೆಹೋವನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವನನ್ನು ತಿಳಿದುಕೊಳ್ಳುವರು ಮತ್ತು ಯಜ್ಞನೈವೇದ್ಯಗಳಿಂದ ಸೇವೆ ಮಾಡುವರು. ಹೌದು, ಯೆಹೋವನಿಗೆ ಪ್ರಮಾಣ ಮಾಡಿಕೊಂಡು ಅದನ್ನು ನೆರವೇರಿಸುವರು. 22 ಇದಲ್ಲದೆ ಯೆಹೋವನು ಐಗುಪ್ತವನ್ನು ಹೊಡೆಯುವನು. ಗಾಯಮಾಡಿ ವಾಸಿಮಾಡುವವನಾಗಿಯೇ ಹೊಡೆಯುವನು. ಅವರು ಯೆಹೋವನ ಕಡೆಗೆ ತಿರುಗಿಕೊಳ್ಳುವರು. ಆತನು ಅವರ ವಿಜ್ಞಾಪನೆಯನ್ನು ಲಾಲಿಸಿ ಅವರನ್ನು ಗುಣಪಡಿಸುವನು.
23 ಆ ದಿನದಲ್ಲಿ, ಐಗುಪ್ತದಿಂದ ಅಶ್ಶೂರಕ್ಕೆ ಹೋಗಲು ರಾಜಮಾರ್ಗವಿರುವುದು. ಅಶ್ಶೂರ್ಯರು ಐಗುಪ್ತಕ್ಕೂ, ಐಗುಪ್ತರು ಅಶ್ಶೂರಕ್ಕೂ ಹೋಗಿ ಬರುವರು. ಐಗುಪ್ತರು ಅಶ್ಶೂರ್ಯರೊಂದಿಗೆ ಯೆಹೋವನನ್ನು ಆರಾಧಿಸುವರು.
24 ಆ ದಿನದಲ್ಲಿ, ಇಸ್ರಾಯೇಲರು ಐಗುಪ್ತ, ಅಶ್ಶೂರಗಳೊಂದಿಗೆ ಮೂರನೆಯದಾಗಿ ಬೆರೆತು ಲೋಕದ ಮಧ್ಯದಲ್ಲಿ ಆಶೀರ್ವಾದ ನಿಧಿಯಾಗಿರುವುದು. 25 “ನನ್ನ ಪ್ರಜೆಯಾದ ಐಗುಪ್ತಕ್ಕೂ, ನನ್ನ ಕೈಯಿಂದ ಸೃಷ್ಟಿಸಲ್ಪಟ್ಟ ಅಶ್ಶೂರಕ್ಕೂ, ನನ್ನ ಸ್ವತ್ತಾದ ಇಸ್ರಾಯೇಲಿಗೂ ಶುಭವಾಗಲಿ” ಎಂದು ಸೇನಾಧೀಶ್ವರನಾದ ಯೆಹೋವನು ಅವುಗಳನ್ನು ಆಶೀರ್ವದಿಸುವನು.