6 ನಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. 7 ಭೂಮಿಯ ಮೇಲಿದ್ದ ನೀರು ಒಣಗುವ ತನಕ ಆ ಕಾಗೆ ಹೋಗುತ್ತಾ ಬರುತ್ತಾ ಇತ್ತು. 8 ಹೀಗಿರಲಾಗಿ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನೋಹನು ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು. 9 ಆದರೆ ನೀರು ಭೂಮಿಯ ಮೇಲೆಲ್ಲಾ ಇದ್ದುದರಿಂದ ಪಾರಿವಾಳವು ಕಾಲಿಡುವುದಕ್ಕೆ ಸ್ಥಳ ಕಾಣದೆ ತಿರುಗಿ ನಾವೆಗೆ ಬಂದಿತು. ನೋಹನು ಕೈಚಾಚಿ ಅದನ್ನು ಹಿಡಿದು ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು. 10 ಅವನು ಇನ್ನೂ ಏಳು ದಿನಗಳ ನಂತರ ಪಾರಿವಾಳವನ್ನು ತಿರುಗಿ ಹೊರಕ್ಕೆ ಬಿಟ್ಟನು. 11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ಹಿಂತಿರುಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೆ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದು ಹೋಯಿತೆಂದು ತಿಳಿದುಕೊಂಡನು. 12 ಮತ್ತೆ ಏಳು ದಿನದ ಮೇಲೆ ಪಾರಿವಾಳವನ್ನು ಬಿಡಲು ಅದು ಅವನ ಬಳಿಗೆ ಹಿಂತಿರುಗಿ ಬರಲೇ ಇಲ್ಲ.
13 ಆರುನೂರ ಒಂದನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಾಕ್ಷಿಯನ್ನು ತೆಗೆದು ನೋಡಲಾಗಿ, ಆಹಾ, ಭೂಮಿಯು ಪೂರ್ಣವಾಗಿ ಒಣಗಿತ್ತು. 14 ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿ ಒಣಗಿತ್ತು.
15 ಆಗ ದೇವರು ನೋಹನಿಗೆ, 16 “ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ; 17 ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿಮಿಕೀಟ ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ” ಎಂದು ಹೇಳಿದನು. 18 ನೋಹನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ಹೊರಗೆ ಬಂದನು. 19 ಎಲ್ಲಾ ಮೃಗಗಳು, ಪಶು ಪಕ್ಷಿಗಳು, ಕ್ರಿಮಿಕೀಟಗಳ ಸಹಿತವಾಗಿ ತಮ್ಮತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.