Link to home pageLanguagesLink to all Bible versions on this site
5
ಆದಾಮನ ವಂಶಾವಳಿ
1ಪೂರ್ವ 1:1-4

1 ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು. 2 ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.

3 ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು. 4 ಸೇತನು ಹುಟ್ಟಿದ ಮೇಲೆ, ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರ್ಷ ಬದುಕಿದನು. 5 ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.

6 ಸೇತನು ನೂರ ಐದು ವರ್ಷದವನಾದಾಗ, ಎನೋಷನನ್ನು ಪಡೆದನು. 7 ಎನೋಷನು ಹುಟ್ಟಿದ ಮೇಲೆ, ಸೇತನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರ ಏಳು ವರ್ಷ ಬದುಕಿದನು. 8 ಸೇತನು ಒಟ್ಟು ಒಂಭೈನೂರ ಹನ್ನೆರಡು ವರ್ಷ ಬದುಕಿ ನಂತರ ಸತ್ತನು.

9 ಎನೋಷನು ತೊಂಭತ್ತು ವರ್ಷದವನಾದಾಗ, ಕೇನಾನನನ್ನು ಪಡೆದನು. 10 ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರ್ಷ ಬದುಕಿದನು. 11 ಎನೋಷನು ಒಟ್ಟು ಒಂಭೈನೂರ ಐದು ವರ್ಷ ಬದುಕಿ ನಂತರ ಸತ್ತನು.

12 ಕೇನಾನನು ಎಪ್ಪತ್ತು ವರ್ಷದವನಾದಾಗ, *ಮಹಲಲೇಲ ಎಂದರೆ ದೇವರಿಗೆ ಸ್ತೋತ್ರ.ಮಹಲಲೇಲನನ್ನು ಪಡೆದನು. 13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಲ್ವತ್ತು ವರ್ಷ ಬದುಕಿದನು. 14 ಕೇನಾನನು ಒಟ್ಟು ಒಂಭೈನೂರ ಹತ್ತು ವರ್ಷ ಬದುಕಿ ನಂತರ ಸತ್ತನು.

15 ಮಹಲಲೇಲನು ಅರವತ್ತೈದು ವರ್ಷದವನಾದಾಗ ಯೆರೆದನನ್ನು ಪಡೆದನು. 16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರ್ಷ ಬದುಕಿದನು.

17 ಮಹಲಲೇಲನು ಒಟ್ಟು ಎಂಟುನೂರ ತೊಂಭತ್ತೈದು ವರ್ಷ ಬದುಕಿ ನಂತರ ಸತ್ತನು.

18 ಯೆರೆದನು ನೂರ ಅರುವತ್ತೆರಡು ವರ್ಷದವನಾದಾಗ ಹನೋಕನನ್ನು ಪಡೆದನು. 19 ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರ್ಷ ಬದುಕಿದನು. 20 ಯೆರೆದನು ಒಟ್ಟು ಒಂಭೈನೂರ ಅರುವತ್ತೆರಡು ವರ್ಷ ಬದುಕಿ ನಂತರ ಸತ್ತನು.

21 ಹನೋಕನು ಅರುವತ್ತೈದು ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು. 22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರ್ಷ ಬದುಕಿದನು. 23 ಹನೋಕನು ಬದುಕಿದ ಒಟ್ಟು ಕಾಲ ಮುನ್ನೂರ ಅರುವತ್ತೈದು ವರ್ಷಗಳು. 24 ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.

25 ಮೆತೂಷೆಲಹನು ನೂರ ಎಂಭತ್ತೇಳು ವರ್ಷದವನಾದಾಗ ಲೆಮೆಕನನ್ನು ಪಡೆದನು. 26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರ್ಷ ಬದುಕಿದನು. 27 ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.

28 ಲೆಮೆಕನು ನೂರ ಎಂಭತ್ತೆರಡು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು. 29 ಅವನಿಗೆ “ನೋಹ” ಎಂದು ಹೆಸರಿಟ್ಟು, “ಯೆಹೋವನು ಶಾಪಕೊಟ್ಟ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಅನುಭವಿಸುತ್ತಿರುವ ಶ್ರಮೆಗೆ ಈ ಮಗನಿಂದ ಆದರಣೆ ಸಿಕ್ಕುವುದು” ಎಂದು ಹೇಳಿದನು. 30 ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರ್ಷ ಬದುಕಿದನು. 31 ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿ ನಂತರ ಸತ್ತನು.

32 ನೋಹನು ಐನೂರು ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಗಂಡು ಮಕ್ಕಳನ್ನು ಪಡೆದನು.

<- ಆದಿಕಾಂಡ 4ಆದಿಕಾಂಡ 6 ->