7 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನನ್ನ ನಿಯಮಗಳನ್ನು ಅನುಸರಿಸದೆ, ನನ್ನ ವಿಧಿಗಳನ್ನು ಕೈಕೊಳ್ಳದೆ, ನಿಮ್ಮ ಸುತ್ತಲಿನ ಜನಾಂಗಗಳ ಧರ್ಮವಿಧಿಗಳನ್ನು ಆಚರಿಸಿ, ಆ ಜನಾಂಗಗಳಿಗಿಂತ ಹೆಚ್ಚು ದಂಗೆಕೋರರಾಗಿ ವರ್ತಿಸಿದ್ದೀರಿ. 8 ಆದುದರಿಂದ ಯೆರೂಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು ಇದು ಕರ್ತನಾದ ಯೆಹೋವನ ನುಡಿ. 9 ನೀನು ಬಹಳ ಅಸಹ್ಯಕಾರ್ಯಗಳನ್ನು ನಡಿಸಿದ್ದರಿಂದ ನಾನು ಈವರೆಗೂ ಇನ್ನು ಮುಂದೆಯೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು. 10 ಹೀಗಿರಲು, ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.”
11 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ, ಅಸಹ್ಯ ವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ನಿನ್ನನ್ನು ಕುಂದಿಸುವೆನು, ನಾನು ನಿನಗೆ ಕರುಣೆ ತೋರಿಸೆನು, ಕಟಾಕ್ಷಿಸೆನು. 12 ನಿನ್ನಲ್ಲಿನ ಮೂರನೆಯ ಒಂದು ಭಾಗದವರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲಿ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲೂ ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
13 “ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಸುರಿದು ಶಾಂತನಾಗುವೆನು; ರೋಷದಿಂದ ಮಾತನಾಡಿದವನು ಯೆಹೋವನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು. 14 ಹಾದುಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳುಮಾಡಿ, ಸುತ್ತಲಿನ ಜನಾಂಗಗಳ ನಿಂದೆಗೆ ಗುರಿ ಮಾಡುವೆನು.
15 “ನಾನು ಕೋಪದಿಂದಲೂ, ರೋಷದಿಂದಲೂ, ಕಠಿಣವಾದ ಖಂಡನೆಯಿಂದಲೂ, ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ, ಪರಿಹಾಸ್ಯಗಳಿಗೂ, ಬುದ್ಧಿವಾದಗಳಿಗೂ ಆಸ್ಪದವಾಗುವವು; ಇದು ಯೆಹೋವನಾದ ನನ್ನ ನುಡಿ. 16 ಆಗ ನಾನು ನಿನ್ನನ್ನು ಹಾಳುಮಾಡಲಿಕ್ಕೆ ಕ್ಷಾಮವೆಂಬ ನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು; ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ಕಳುಹಿಸುವ ಕ್ಷಾಮದಿಂದಲೂ, ದುಷ್ಟಮೃಗಗಳಿಂದಲೂ ನಿನಗೆ ಪುತ್ರಶೋಕವು ಉಂಟಾಗುವುದು; ವ್ಯಾಧಿಯೂ, ರಕ್ತ ಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು” ಇದು ಯೆಹೋವನಾದ ನನ್ನ ನುಡಿ.
<- ಯೆಹೆಜ್ಕೇಲನು 4ಯೆಹೆಜ್ಕೇಲನು 6 ->