Link to home pageLanguagesLink to all Bible versions on this site
32
ಫರೋಹನಿಗಾಗಿ ಶೋಕ ಗೀತೆ
1 (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕ ಗೀತೆಯನ್ನು ಹಾಡಿ ಅವನಿಗೆ ಹೀಗೆ ನುಡಿ,
‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ.
ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು, ನೀರನ್ನು ನಿನ್ನ ಕಾಲುಗಳಿಂದ ಕಲಕಿ, ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದೆ.’ ”

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ,

“ಗುಂಪಾಗಿ ಕೂಡಿದ ಬಹು ಜನಾಂಗಗಳವರ ಮೇಲೆ ನಾನು ನನ್ನ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು.
4 ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು;
ನಿನ್ನನ್ನು ಬಯಲಿನಲ್ಲಿ ಎಸೆದು ಆಕಾಶದ ಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ, ಸಮಸ್ತ ಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು.
5 ನಿನ್ನ ಮಾಂಸವನ್ನು ಗುಡ್ಡಗಳ ಮೇಲೆ ಹಾಕಿ, ಆ ನಿನ್ನ ಕಣಿವೆಗಳನ್ನು ಹೆಣಗಳ ರಾಶಿಯಿಂದ ತುಂಬಿಸುವೆನು.
6 ನಿನ್ನ ರಕ್ತಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸುವೆನು;
ಹಳ್ಳಗಳು ನಿನ್ನ ರಕ್ತದಿಂದ ತುಂಬುವವು.
7 ಫರೋಹನನೇ, ಆಗ ನಾನು ನಿನ್ನ ಬೆಳಕನ್ನು ನಂದಿಸುವಾಗ, ಆಕಾಶಕ್ಕೆ ಮುಸುಕುಹಾಕಿ,
ಅಲ್ಲಿನ ನಕ್ಷತ್ರಗಳನ್ನು ಮಸುಕುಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು.
8 ನಿನ್ನ ಮೇಲೆ ಆಕಾಶದಲ್ಲಿ ಮಿನುಗುವ ಸಕಲ ಜ್ಯೋತಿಗಳನ್ನೂ ನಾನು ಮಸುಕುಮಾಡಿ,
ನಿನ್ನ ದೇಶವನ್ನು ಕತ್ತಲು ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.

9 “ನಾನು ನಿನ್ನ ನಾಶದ ಸುದ್ದಿಯನ್ನು, ಜನಾಂಗಗಳಲ್ಲಿ ನಿನಗೆ ತಿಳಿಯದ ದೇಶಗಳಿಗೂ ಮುಟ್ಟಿಸುವಾಗ, ಅವರ ಮನಸ್ಸಿನಲ್ಲಿ ಗಲಿಬಿಲಿಯನ್ನು ಎಬ್ಬಿಸುವೆನು. 10 ಹೌದು, ಅನೇಕ ಜನಾಂಗಗಳು ನಿನ್ನ ವಿಷಯದಲ್ಲಿ ಬೆಚ್ಚಿಬೆರಗಾಗುವಂತೆ ಮಾಡುವೆನು, ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಸುವಾಗ, ಅವರು ನಿನ್ನ ದುರ್ಗತಿಯನ್ನು ನೆನಸಿ ಭಯಭ್ರಾಂತರಾಗುವರು; ನಿನ್ನ ಸೋಲಿನ ದಿನದಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣದ ಬಗ್ಗೆ ಕ್ಷಣಕ್ಷಣವೂ ನಡುಗುವನು.”

11 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲಿನ ಅರಸನ ಖಡ್ಗವು ನಿನ್ನ ಮೇಲೆ ಬೀಳುವುದು.

12 ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು.
ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು.
ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು.
13 ನಾನು ಬಹು ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು;
ಇನ್ನು ಮೇಲೆ ಯಾವ ಮನುಷ್ಯನ ಕಾಲಾಗಲಿ, ಯಾವ ಪಶುವಿನ ಗೊರಸಾಗಲಿ ನೀರಿನಲ್ಲಿ ಹೆಜ್ಜೆಯಿಡುವುದಿಲ್ಲ.
14 ಆಗ ಆ ನೀರು ತಿಳಿಯಾಗುವಂತೆಯೂ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆಯೂ ಮಾಡುವೆನು”
ಇದು ಕರ್ತನಾದ ಯೆಹೋವನ ನುಡಿ.
15 “ಐಗುಪ್ತದಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ನಾನು ಧ್ವಂಸಗೊಳಿಸಿ,
ಆ ದೇಶವನ್ನು ಹಾಳುಮಾಡಿ, ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಯೆಹೋವನು ಎಂದು ಗೊತ್ತಾಗುವುದು.
16 ಪ್ರಲಾಪಿಸುವವರು ಈ ಶೋಕ ಗೀತವನ್ನೆತ್ತಲಿ; ಜನಾಂಗಗಳ ಯುವತಿಯರು ಹೀಗೆ ಗೋಳಾಡಲಿ; ಐಗುಪ್ತಕ್ಕಾಗಿಯೂ,
ಅಲ್ಲಿನ ಬಹು ಪ್ರಜೆಗಳಿಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ” ಇದು ಕರ್ತನಾದ ಯೆಹೋವನ ನುಡಿ.
ಫರೋಹನ ಪಾತಾಳಪ್ರವೇಶ
17 (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
18 “ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ,
ಅವರನ್ನೂ ಮತ್ತು ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.
19 ಐಗುಪ್ತ್ಯವೇ, ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಹೀನರ ಸಂಗಡ ಮಲಗು.
20 ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಐಗುಪ್ತವೂ ಮತ್ತು ಅದರ ಸಮೂಹವೂ ಕತ್ತಿಗೆ ಒಪ್ಪಿಸಲ್ಪಟ್ಟಿದೆ.
21 ಪಾತಾಳದೊಳಗಿನ ಬಲಿಷ್ಠ ಶೂರರು ಅದನ್ನೂ, ಅದರ ಸಹಾಯಕರನ್ನೂ ನೋಡಿ,
‘ಇವರು ಸುನ್ನತಿಯಿಲ್ಲದವರಾಗಿಯೂ, ಖಡ್ಗದಿಂದ ಹತರಾದವರಾಗಿಯೂ ಇಳಿದು ಬಂದಿದ್ದಾರೆ’ ಅಂದುಕೊಳ್ಳುವರು.
22 ಅಶ್ಶೂರವೂ ಮತ್ತು ಅದರ ಎಲ್ಲಾ ಗುಂಪು ಅಲ್ಲಿರುತ್ತವೆ. ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ;
ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು.
23 ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಸಂಹೃತರಾದವರು,
ಖಡ್ಗದಿಂದ ಹತರಾದವರು ಗೋರಿಯ ಸುತ್ತಲಿದ್ದಾರೆ;
ಜೀವಲೋಕದಲ್ಲಿ ಹತರಾದವರು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದಾರೆ.
24 ಅಲ್ಲಿ ಏಲಾಮು ಮತ್ತು ಅದರ ಸಮೂಹವು ಗೋರಿಯನ್ನು ಸುತ್ತಿಕೊಂಡಿದೆ;
ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು;
ಜೀವಲೋಕದಲ್ಲಿ ಭೀಕರರಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
25 ಏಲಾಮು ಮಲಗುವುದಕ್ಕೆ ಹತರಾದ ಅದರ ಸಮೂಹಕ್ಕೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತುಮುತ್ತಲಿವೆ;
ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು,
ಪ್ರೇತಗಳ ಜೊತೆಗೆ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳವು ಏರ್ಪಾಡಾಗಿದೆ.
26 ಅಲ್ಲಿ ಮೆಷೆಕ್ ತೂಬಲ್ ಮತ್ತು ಅವುಗಳ ಎಲ್ಲಾ ಸಮೂಹವು ಅಲ್ಲಿರುತ್ತವೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ;
ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದಾರೆ.
27 ಸುನ್ನತಿಯಿಲ್ಲದವರಲ್ಲಿ ಶೂರರು ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು ಹತರಾಗಿ,
ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು,
ತಮ್ಮ ಎಲಬುಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದಾರೋ ಅವರ ನಡುವೆ ಮೆಷೆಕಿನವರೂ ತೂಬಲಿನವರೂ ಒರಗದೆ ಹೋಗುವರೇ?
28 ಐಗುಪ್ತ್ಯವೇ, ನೀನು ಸುನ್ನತಿಹೀನರ ಮಧ್ಯದಲ್ಲಿ ನಾಶವಾಗಿ ಖಡ್ಗದಿಂದ ಹತರಾದವರ ನಡುವೆ ಮಲಗುವೆ!
29 ಅಲ್ಲಿ ಎದೋಮು, ಅದರ ಅರಸರೂ ಮತ್ತು ಎಲ್ಲಾ ಸರದಾರರೂ ಅಲ್ಲಿದ್ದಾರೆ; ಅವರು ಬಲಾತ್ಕಾರಿಗಳಾಗಿದ್ದು ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ಸಂಗಡ ಮಲಗಿದ್ದಾರೆ.

30 “ಉತ್ತರ ದೇಶದ ಸಕಲ ಪ್ರಭುಗಳೂ ಸಮಸ್ತ ಮತ್ತು ಚೀದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರವಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೊಂಡು ಖಡ್ಗದಿಂದ ಹತರಾದವರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. 31 ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನ ಹೊಂದುವನು; ಹೌದು, ಫರೋಹನೂ ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು” ಇದು ಕರ್ತನಾದ ಯೆಹೋವನ ನುಡಿ. 32 “ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಮತ್ತು ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ, ಖಡ್ಗದಿಂದ ಹತರಾದವರ ನಡುವೆ ಮಲಗುವರು” ಎಂಬುದು ಕರ್ತನಾದ ಯೆಹೋವನ ನುಡಿ.

<- ಯೆಹೆಜ್ಕೇಲನು 31ಯೆಹೆಜ್ಕೇಲನು 33 ->