3 “ಇಗೋ, ನೀನು ದಾನಿಯೇಲನಿಗಿಂತಲೂ ಜ್ಞಾನಿಯಾಗಿರುವೆಯಾ; ನಿನಗೆ ರಹಸ್ಯವಾದುದು ಯಾವುದೇ ಇದ್ದರು ನಿನಗೆ ಮರೆಯಾಗಿರುವುದಿಲ್ಲ? 4 ನಿನ್ನ ಜ್ಞಾನದಿಂದಲೂ, ನಿನ್ನ ವಿವೇಕದಿಂದಲೂ ನೀನು ಐಶ್ವರ್ಯವನ್ನು ಹೆಚ್ಚಿಸಿಕೊಂಡಿರುವೆ. ನಿನ್ನ ಭಂಡಾರಗಳಲ್ಲಿ ಬೆಳ್ಳಿಯನ್ನೂ, ಬಂಗಾರವನ್ನು ತುಂಬಿಸಿಕೊಂಡಿದ್ದೀ. 5 ನೀನು ನಿನ್ನ ಅಧಿಕ ಜ್ಞಾನದಿಂದ ವ್ಯಾಪಾರದಲ್ಲಿ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ.[a] ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಕೊಂಡಿದೆ.”
6 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ. “ನೀನು ನಿನ್ನನ್ನು ದೇವರಿಗೆ ಸಮಾನವಾಗಿಸಿಕೊಂಡಿರುವೆ. 7 ಆದುದರಿಂದ ನಾನು ನಿನ್ನ ಮೇಲೆ ಭಯಂಕರವಾದ ಜನಾಂಗದವರಾದ ಮ್ಲೇಚ್ಛರನ್ನು ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು.
8 “ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರದ ಮಧ್ಯದಲ್ಲಿ ಹತರಾದವರ ಹಾಗೆ ನೀನು ಸಾಯುವಿ. 9 ನೀನು ನಿನ್ನನ್ನು ಸಂಹರಿಸುವವರ ಎದುರಿಗೆ ನಾನು ದೇವರು ಎಂದು ಹೇಳುವೆಯೋ? ನಿನ್ನನ್ನು ಸಂಹರಿಸುವವನ ಕೈಯಲ್ಲಿ ನೀನು ದೇವರಲ್ಲ, ನರಪ್ರಾಣಿಯೇ. 10 ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವಿ; ಏಕೆಂದರೆ ನಾನೇ ಇದನ್ನು ನುಡಿದಿದ್ದೇನೆ” ಎಂದು ಕರ್ತನಾದ ಯೆಹೋವನು ಹೇಳಿದ್ದಾನೆ.
11 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು, 12 “ನರಪುತ್ರನೇ, ನೀನು ತೂರಿನ ಅರಸನ ವಿಷಯದಲ್ಲಿ ಶೋಕ ಗೀತೆಯನ್ನು ಹಾಡು, ಅವನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಸರ್ವಸುಲಕ್ಷಣ ಶಿರೋಮಣಿ, ಪೂರ್ಣಜ್ಞಾನಿ, ಪರಿಪೂರ್ಣಸುಂದರಿ. 13 ದೇವರ ಉದ್ಯಾನವನವಾದ ಏದೆನಿನಲ್ಲಿ ನೀನಿದ್ದೆ; ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು ಸ್ಫಟಿಕ, ಚಿನ್ನ ಈ ಅಮೂಲ್ಯ ರತ್ನಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿರುವ ಈ ರತ್ನಗಳು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
14 “ ‘ನೀನು ರೆಕ್ಕೆತೆರೆದು ನೆರಳು ನೀಡುವ ಕೆರೂಬಿಯಾಗಿದ್ದೆ; ನಾನು ನಿನ್ನನ್ನು ದೇವರ ಪರಿಶುದ್ಧ ಪರ್ವತದಲ್ಲಿ ನೆಲೆಗೊಳಿಸಿದೆನು; ನೀನು ಅಮೂಲ್ಯ ರತ್ನಗಳ ಕೆಂಡದ ಮಧ್ಯದಲ್ಲಿ ವಿಹಾರ ಮಾಡುತ್ತಿದ್ದೆ. 15 ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.
16 “ ‘ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದೆ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಅಪವಿತ್ರನೆಂದು ತಳ್ಳಿಬಿಟ್ಟೆನು; ಹೌದು, ನೆರಳು ನೀಡುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
17 “ ‘ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಬುದ್ಧಿಯನ್ನು ಹಾಳು ಮಾಡಿಕೊಂಡೆ; ನಾನು ನಿನ್ನನ್ನು ನೆಲಕ್ಕೆ ಹಾಕಿ, ನಿನ್ನನ್ನು ಅರಸರು ನೋಡುವಂತೆ ಅವರ ಕಣ್ಣ ಮುಂದೆ ಹಾಕುವೆನು. 18 ನಿನ್ನ ಅಪಾರವಾದ ಅಪರಾಧಗಳಿಂದಲೂ, ಅನ್ಯಾಯವಾದ ವ್ಯಾಪಾರದಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸು ಮಾಡಿದೆ; ಆದುದರಿಂದ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು, ಅದು ನಿನ್ನನ್ನು ನುಂಗಿತು, ನೋಡುವವರೆಲ್ಲರ ಕಣ್ಣೆದುರಿಗೆ ನಿನ್ನನ್ನು ಬೂದಿ ಮಾಡಿಬಿಟ್ಟೆನು. 19 ಜನಾಂಗಗಳಲ್ಲಿ ನಿನ್ನನ್ನು ಬಲ್ಲವರೆಲ್ಲರೂ ನಿನ್ನ ಗತಿಗೆ ಬೆಚ್ಚಿ ಬೆರಗಾಗುವರು; ನೀನು ಸಂಪೂರ್ಣ ನಾಶವಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’ ”
24 “ಇಸ್ರಾಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನು ಮೇಲೆ ಇರುವುದಿಲ್ಲ; ಹೀನೈಸುವ ನೆರೆಹೊರೆಯವರೆಂಬ ಕಂಟಕದ ಬಾಧೆಯು ಇನ್ನು ಆಗುವುದಿಲ್ಲ; ನಾನೇ ಕರ್ತನಾದ ಯೆಹೋವನು” ಎಂದು ಅವರಿಗೆ ತಿಳಿಯುವುದು.
- a ನೀನು ನಿನ್ನ ಅಧಿಕ ಜ್ಞಾನದಿಂದ ವ್ಯಾಪಾರದಲ್ಲಿ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಅಧಿಕಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರಲು.