Link to home pageLanguagesLink to all Bible versions on this site
21
ಯೆಹೋವನ ಖಡ್ಗ, ಪ್ರವಾದಿಯ ದುಃಖ
1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ನೀನು ಯೆರೂಸಲೇಮಿನ ಅಭಿಮುಖನಾಗಿ ಅಲ್ಲಿನ ಪವಿತ್ರ ಸ್ಥಾನಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶ ಕುರಿತು ಪ್ರವಾದಿಸಿ, 3 ಇಸ್ರಾಯೇಲ್ ದೇಶಕ್ಕೆ ಹೀಗೆ ಸಾರಿ ಹೇಳು, ‘ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು, ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಿ ಬಿಡುವೆನು. 4 ನಾನು ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರದವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು. 5 ಆಗ ಯೆಹೋವನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ’ ಎಂಬುದು ಎಲ್ಲಾ ನರಮನುಷ್ಯರಿಗೂ ಗೊತ್ತಾಗುವುದು; ಅದು ಪುನಃ ಒರೆಗೆ ಸೇರದು.”

6 “ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು. 7 ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ, ‘ಕೆಟ್ಟ ವಾರ್ತೆಯ ನಿಮಿತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವುದು; ಎಲ್ಲರ ಕೈ ಜೋಲು ಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವುದು; ಇಗೋ, ಬಂದಿತು, ಬಂದಾಯಿತು’ ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.”

ಖಡ್ಗ ಗೀತೆ
8 ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 9 “ನರಪುತ್ರನೇ, ಕರ್ತನು ಇಂತೆನ್ನುತ್ತಾನೆ ಎಂಬುದಾಗಿ ನುಡಿದು ಹೀಗೆ ಸಾರು,
‘ಆಹಾ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ!
10 ಸಂಹರಿಸುವಂತೆ ಸಾಣೆ ಹಿಡಿದಿದೆ, ಮಿಂಚುವಂತೆ ಮಸೆದಿದೆ;
ನಮ್ಮ ಕುಮಾರನ ರಾಜದಂಡವು ಉಳಿದ ಎಲ್ಲಾ ದಂಡಗಳನ್ನು ತಿರಸ್ಕರಿಸುತ್ತದಲ್ಲಾ ಎಂಬುದಾಗಿ ನಾವು ಸಂಭ್ರಮಪಡಬಹುದೇ?
11 ಖಡ್ಗವು ಕೈಗೆ ಸಿಗುವಂತೆ ಮಸೆದು ಸಿದ್ಧವಾಗಿದೆ,
ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ಮಸೆದಿದೆ.
12 ನರಪುತ್ರನೇ, ಕೂಗಿಕೋ, ಗೋಳಾಡು! ಖಡ್ಗವು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಬಿದ್ದಿದೆ;
ಆ ಪ್ರಭುಗಳು ನನ್ನ ಜನರೊಂದಿಗೆ ಖಡ್ಗಕ್ಕೆ ತುತ್ತಾಗಿದ್ದಾರೆ; ತೊಡೆಯನ್ನು ಬಡಿದುಕೋ.’ ”
13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಶೋಧನೆಯು ಸಂಭವಿಸಿತು; ತಿರಸ್ಕರಿಸುತ್ತಿದ್ದ ರಾಜದಂಡವೇ ನಾಶವಾದರೆ ಗತಿಯೇನು?
14 ನರಪುತ್ರನೇ, ನೀನು ದೈವೋಕ್ತಿಯನ್ನು ಸಾರಿ ಚಪ್ಪಾಳೆ ಹೊಡಿ; ಖಡ್ಗವು ಎರಡರಷ್ಟು, ಮೂರರಷ್ಟು ಸಂಹರಿಸಲಿ!
ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ, ಅಧಿಪತಿಯನ್ನು ಹತಿಸುವ ಖಡ್ಗ!
15 ಅವರ ಹೃದಯವು ನೀರಾಗಿ ಬಹಳ ಜನರು ಎಡವಿ ಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ಮಿಂಚಿನಂತೆ ಮಿಂಚುತ್ತದೆ, ವಧೆಗಾಗಿ ಹಂತವಾಗಿ ಸಿದ್ಧವಾಗಿದೆ!
16 ಖಡ್ಗವೇ, ಏಕಾಗ್ರವಾಗಿ ಬಲಕ್ಕೆ ಹೋಗು, ಸಿದ್ಧವಾಗಿ ಎಡಕ್ಕೆ ಸಾಗು, ನಿನ್ನ ಖಡ್ಗದ ಮೊನೆಯಿದ್ದ*ಖಡ್ಗದ ಮೊನೆಯಿದ್ದ ಮುಖವಿದ್ದ. ಕಡೆಗೇ ಹೊರಡು.
17 ನಾನು ಚಪ್ಪಾಳೆ ಹೊಡೆದು ನನ್ನ ರೋಷವನ್ನು ತೀರಿಸಿಕೊಳ್ಳುವೆನು. ಕರ್ತನಾದ ನಾನೇ ಇದನ್ನು ನುಡಿದಿದ್ದೇನೆ.”
ಶತ್ರು ರಾಜನ ಆಗಮನ
18 ಯೆಹೋವನು ನನಗೆ ಮತ್ತೊಂದು ವಾಕ್ಯವನ್ನು ದಯಪಾಲಿಸಿದನು, 19 “ನರಪುತ್ರನೇ, ಬಾಬೆಲಿನ ಅರಸನ ಖಡ್ಗವು ಬರುವುದಕ್ಕೆ ಎರಡು ದಾರಿಗಳ ನಕ್ಷೆಯನ್ನು ಬರೆ; ಅವೆರಡು ಒಂದೇ ದೇಶದಿಂದ ಹೊರಟ ಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು. 20 ಅಮ್ಮೋನ್ಯರ ರಬ್ಬಾ ಎಂಬ ಪಟ್ಟಣಕ್ಕೂ, ಯೆಹೂದದೊಳಗೆ ಕೋಟೆ ಕೊತ್ತಲಗಳಿಂದ ಕೂಡಿದ ಯೆರೂಸಲೇಮಿಗೂ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.

21 “ಮಾರ್ಗವು ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನ ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆಕೇಳಿ, ಕಾಳಿಜವನ್ನು ಪರೀಕ್ಷಿಸಿದ್ದಾನೆ.

22 ಯೆರೂಸಲೇಮಿನ ಗುರುತಿನ ಬಾಣವು ಅವನ ಬಲಗೈಗೆ ಸಿಕ್ಕಿದೆ; ಅಲ್ಲಿ ಅವನು ಚಿತ್ತವನ್ನು ಭೇದಿಸುವ ಆಯುಧಗಳನ್ನು ನಿಲ್ಲಿಸಿ,
ಬಾಯಿದೆರೆದು ಸಂಹಾರ ಧ್ವನಿಗೈದು ಕೂಗಿ! ಬಾಗಿಲುಗಳ ಎದುರಾಗಿ ಚಿತ್ತ ಭೇದಕ ಯಂತ್ರಗಳನ್ನು ನಿಲ್ಲಿಸಿ,
ಒಡ್ಡು ಕಟ್ಟಬೇಕೆಂದು ಅದರಿಂದ ಸೂಚನೆಯಾಯಿತು.
23 ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸವಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು;
ಆದರೆ ಅವನು ಅವರ ಅಧರ್ಮವನ್ನು ಬಯಲಿಗೆ ತರಲು ಅವನ ಕೈಗೆ ಸಿಕ್ಕಿಬೀಳುವರು.”
ಚಿದ್ಕೀಯನ ದುರ್ಗತಿ
24 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಅಪರಾಧಗಳು ಬಯಲಿಗೆ ಬಂದು,
ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ತಲೆದೋರಿ,
ನೀವು ನಿಮ್ಮ ಅಧರ್ಮವನ್ನು ನನ್ನ ಜ್ಞಾಪಕಕ್ಕೆ ತಂದು,
ಪಾಪಿಗಳಾಗಿ ನನ್ನ ನೆನಪಿಗೆ ತಂದಿರುವಿರಿ. ಆದುದರಿಂದ ಶತ್ರುವಿನ ಕೈಗೆ ಸಿಕ್ಕಿ ಬೀಳುವಿರಿ.
25 ಇಸ್ರಾಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ! ನಿನಗೆ ಸಮಯವು ಹತ್ತಿರವಾಗಿದೆ; ಇದೇ ನಿನ್ನ ಅಪರಾಧದ ಕಡೆಗಾಲ.” 26 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ತೆಗೆದುಹಾಕು! ಅದು ಹಾಗೆಯೇ ಇರುವುದಿಲ್ಲ; ತಗ್ಗಿಸಲ್ಪಟ್ಟವನನ್ನು ಹೆಚ್ಚಿಸಿ, ಹೆಚ್ಚಿಸಲ್ಪಟ್ಟವನನ್ನು ತಗ್ಗಿಸುವೆನು. 27 ಧ್ವಂಸ, ನಾನು ಧ್ವಂಸ ಮಾಡುವೆನು; ರಾಜ್ಯಕ್ಕೆ ಬಾಧ್ಯನು ಬರುವುದರೊಳಗೆ ಒಂದೂ ಇದ್ದಂತೆ ಇರದು; ಅವನಿಗೆ ರಾಜ್ಯವನ್ನು ವಹಿಸುವೆನು.”
ಅಮ್ಮೋನಿನ ಮೇಲೆ ಬೀಳುವ ಖಡ್ಗ
28 ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ, “ಅಮ್ಮೋನ್ಯರ ವಿಷಯದಲ್ಲಿಯೂ ಮತ್ತು ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಚೆನ್ನಾಗಿ ಮಸೆದಿದೆ. 29 ಅಮ್ಮೋನೇ, ಪ್ರವಾದಿಗಳೆಂದು ಹೇಳಿಕೊಳ್ಳುತ್ತಿರುವ ನಿನ್ನವರು ದರ್ಶನವನ್ನು ನೋಡಿದೆವು ಎಂದು ಸುಳ್ಳು ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಸಮಯವು ಹತ್ತಿರವಾಗಿ, ಅಪರಾಧದ ಕಡೆಗಾಲವು ಸಂಭವಿಸಿ, ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು! ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಒರಗಿ ಬೀಳುವೆ.

30 “ ‘ಕತ್ತಿಯನ್ನು ಒರೆಗೆ ಸೇರಿಸು. ನಿನ್ನ ಸೃಷ್ಟಿಯಾದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ ನಿನಗೆ ನ್ಯಾಯ ತೀರಿಸುವೆನು. 31 ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಊದಿ, ನಿನ್ನನ್ನು ಮೃಗಪ್ರಾಯರೂ, ಹಾಳುಮಾಡುವುದರಲ್ಲಿ ಗಟ್ಟಿಗರೂ ಆದವರ ಕೈಗೆ ಸಿಕ್ಕಿಸುವೆನು. 32 ನೀನು ಅಗ್ನಿಗೆ ಆಹುತಿಯಾಗುವಿ; ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು; ನೀನು ಇನ್ನು ಜ್ಞಾಪಕಕ್ಕೆ ಬರುವುದಿಲ್ಲ’ ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”

<- ಯೆಹೆಜ್ಕೇಲನು 20ಯೆಹೆಜ್ಕೇಲನು 22 ->