6 ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನಿಮ್ಮ ವಿಗ್ರಹಗಳನ್ನು ತೊರೆದುಬಿಟ್ಟು ಹಿಂದಿರುಗಿ, ನಿಮ್ಮ ಎಲ್ಲಾ ಅಸಹ್ಯ ವಸ್ತುಗಳ ಕಡೆಗೆ ಬೆನ್ನುಮಾಡಿರಿ.
7 “ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಮತ್ತು ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ದೂರವಾಗಿ, ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಡುವೆನು. 8 ಅವನ ಮೇಲೆ ಉಗ್ರಕೋಪಗೊಂಡು, ಅವನನ್ನು ಎಚ್ಚರಿಕೆಗೆ ಗುರುತಾಗಿಯೂ, ಕಟ್ಟು ಗಾದೆಗಳಿಗೂ ವಸ್ತುವಾಗಿ ಮಾಡಿ, ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
9 “ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು. 10 ಪ್ರವಾದಿಯ ದೋಷವು ಎಷ್ಟೋ, ಅವನನ್ನು ಪ್ರಶ್ನೆಕೇಳುವವನ ದೋಷವೂ ಅಷ್ಟೇ; ಇಬ್ಬರೂ ತಮ್ಮ ತಮ್ಮ ದೋಷ ಫಲವನ್ನು ಅನುಭವಿಸುವರು. 11 ಹೀಗಾದರೆ ಇಸ್ರಾಯೇಲ್ ವಂಶದವರು ಇನ್ನು ನನ್ನನ್ನು ತೊರೆಯುವುದಿಲ್ಲ, ತಮ್ಮ ಲೆಕ್ಕವಿಲ್ಲದ ದ್ರೋಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವುದಿಲ್ಲ; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು” ಇದು ಕರ್ತನಾದ ಯೆಹೋವನ ನುಡಿ.
15 “ನನ್ನ ಅಪ್ಪಣೆಯ ಮೇರೆಗೆ ದುಷ್ಟ ಮೃಗಗಳು ದೇಶದಲ್ಲಿ ತಿರುಗುತ್ತಾ ಅದನ್ನು ನಿರ್ಜನಗೊಳ್ಳಿಸಿ, ಹಾಳುಮಾಡಿ, ಯಾರೂ ಹಾದು ಹೋಗದಂತೆ ಹೆದರಿಸುವ ಪಕ್ಷದಲ್ಲಿ, 16 ಈ ಮೂವರು ಪುರುಷರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ, ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ದೇಶವು ಹಾಳಾಗಿ ಹೋಗುವುದು” ಇದು ಕರ್ತನಾದ ಯೆಹೋವನ ನುಡಿ.
17 “ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ, ನಾನು ಅದನ್ನು ಆ ದೇಶಕ್ಕೆ ತಂದು, ಜನ ಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ, 18 ಈ ಮೂವರು ಪುರುಷರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ, ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ” ಇದು ಕರ್ತನಾದ ಯೆಹೋವನ ನುಡಿ.
19 “ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ, 20 ನೋಹ, ದಾನಿಯೇಲ, ಯೋಬ ಎಂಬುವರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಮ್ಮ ಸದಾಚಾರದಿಂದ ಸ್ವಂತಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಗನನ್ನಾಗಲಿ, ಹೆಣ್ಣು ಮಗಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ” ಇದು ಕರ್ತನಾದ ಯೆಹೋವನ ನುಡಿ.
21 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು! 22 ಆದರೂ ಸ್ತ್ರೀಪುರುಷರಲ್ಲಿ ಕೆಲವರು ಹೇಗೋ ತಪ್ಪಿಸಿಕೊಂಡು ಉಳಿದು ಅಲ್ಲಿಂದ ಒಯ್ಯಲ್ಪಡುವರು; ಆಹಾ, ಅವರು ನಿಮ್ಮ ಬಳಿಗೆ ಸೇರಿದಾಗ ನೀವು ಅವರ ದುರ್ಮಾರ್ಗ, ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ಬರಮಾಡಿದ ಕೇಡಿನ ವಿಷಯವಾಗಿ, ಅದಕ್ಕೆ ಉಂಟುಮಾಡಿದ ಎಲ್ಲಾ ಕೇಡುಗಳ ವಿಷಯವಾಗಿ ಸಮಾಧಾನ ಹೊಂದುವಿರಿ. 23 ನೀವು ಅವರ ದುರ್ಮಾರ್ಗ, ದುಷ್ಕೃತ್ಯಗಳನ್ನು ನೋಡುವಾಗ ಅವರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಯೆರೂಸಲೇಮಿಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಿದ್ದಲ್ಲವೆಂದು ನಿಮಗೆ ತಿಳಿದು ಬರುವುದು” ಇದು ಕರ್ತನಾದ ಯೆಹೋವನ ನುಡಿ.
<- ಯೆಹೆಜ್ಕೇಲನು 13ಯೆಹೆಜ್ಕೇಲನು 15 ->