1 “ಬೆಚಲೇಲನು ಹಾಗೂ ಒಹೋಲೀಯಾಬನು ಮತ್ತು ಬೇರೆ ಜ್ಞಾನಿಗಳೆಲ್ಲರು ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ಪವಿತ್ರ ದೇವಮಂದಿರವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ ಮಾಡುವರು” ಅಂದನು.
8 ಆ ಕೆಲಸ ಮಾಡುತ್ತಿದ್ದ ಜ್ಞಾನಿಗಳೆಲ್ಲರು ಹೊಸೆದ ನಾರಿನ ಹತ್ತು ಪರದೆಗಳಿಂದ ಗುಡಾರವನ್ನು ಮಾಡಿ ಆ ಪರದೆಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರಗಳಿಂದ ನೇಯ್ಗೆಯವರಂತೆ ಕೆರೂಬಿಗಳನ್ನು ಮಾಡಿ ಅದಕ್ಕೆ ಚಮತ್ಕಾರವಾಗಿ ಕಸೂತಿ ಹಾಕಿ ಮಾಡಿದರು. 9 ಪ್ರತಿಯೊಂದು ಪರದೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು. ಎಲ್ಲಾ ಪರದೆಗಳು ಸಮಾನ ಅಳತೆಯಲ್ಲಿದ್ದವು. 10 ಐದೈದು ಪರದೆಗಳನ್ನು ಒಂದೊಂದಾಗಿ ಜೋಡಿಸಿದರು. 11 ಈ ಎರಡು ಜೋಡಣೆಗಳಲ್ಲಿ ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ 12 ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು. 13 ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು; ಹೀಗೆ ಅದು ಒಂದೇ ಗುಡಾರ ಆಯಿತು.
14 ಬೆಚಲೇಲನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಉಣ್ಣೆಯ ಹನ್ನೊಂದು ಪರದೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದನು. 15 ಒಂದೊಂದು ಪರದೆಯು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು; ಎಲ್ಲಾ ಪರದೆಗಳೂ ಒಂದೇ ಅಳತೆಯಾಗಿದ್ದವು. 16 ಐದು ಪರದೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಪರದೆಗಳನ್ನೂ ಒಂದಾಗಿ ಜೋಡಿಸಿದರು. 17 ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿದರು. 18 ಒಂದೇ ಡೇರೆಯಾಗುವಂತೆ ಸಮಸ್ತವನ್ನು ಜೋಡಿಸುವುದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು. 19 ಅದಲ್ಲದೆ ಹದಮಾಡಿರುವ ಟಗರಿನ ತೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ, ಕಡಲಪ್ರಾಣಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು.
20 ಗುಡಾರಕ್ಕೆ ಜಾಲೀಮರದಿಂದ ನೆಟ್ಟಗೆ ನಿಂತಿರುವ ಹಲಗೆಗಳಿಂದ ಚೌಕಟ್ಟುಗಳನ್ನು ಮಾಡಿದರು. 21 ಪ್ರತಿಯೊಂದು ಚೌಕಟ್ಟೂ ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು; 22 ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿಸಿದರು. 23 ಗುಡಾರದ ದಕ್ಷಿಣದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು; 24 ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೆಕಲ್ಲನ್ನು ಇಟ್ಟರು. 25 ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು 26 ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೆಕಲ್ಲುಗಳ ಮೇರೆಗೆ ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲಗಳನ್ನು ಮಾಡಿದರು. 27 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು. 28 ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು. 29 ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯವರೆಗೂ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು. 30 ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೆಕಲ್ಲುಗಳೂ ಒಟ್ಟು ಹದಿನಾರು ಗದ್ದಿಗೆಕಲ್ಲುಗಳಿದ್ದವು. 31 ಜಾಲೀಮರದಿಂದ ಅಗುಳಿಗಳನ್ನು ಮಾಡಿದರು. 32 ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು. 33 ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು. 34 ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು.
35 ನಯವಾಗಿ ಹೊಸೆದ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ಕೆರೂಬಿಗಳಿಗೆ ಚಮತ್ಕಾರವಾಗಿ ಕಸೂತಿಹಾಕಿ ಒಂದು ತೆರೆಯನ್ನು ಮಾಡಿದರು. 36 ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ ನಾಲ್ಕು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಎರಕಹೊಯಿಸಿದರು.
37 ಡೇರೆಯ ಬಾಗಿಲಿಗೆ ಹುರಿ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿಹಾಕಿ ಪರದೆಯನ್ನು ಮಾಡಿದರು. 38 ಆ ಪರದೆಯನ್ನು ತೂಗು ಹಾಕುವುದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ ಅವುಗಳ ಸುತ್ತಲ ಮೆಟ್ಟಿಲುಗಳಿಗೂ, ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ತಳಭಾಗಗಳನ್ನು ತಾಮ್ರದಿಂದ ಮಾಡಿದರು.
<- ವಿಮೋಚನಕಾಂಡ 35ವಿಮೋಚನಕಾಂಡ 37 ->