Link to home pageLanguagesLink to all Bible versions on this site

ವಿಮೋಚನಕಾಂಡ
ಗ್ರಂಥಕರ್ತೃತ್ವ
ಮೋಶೆಯನ್ನು ಸಾಂಪ್ರದಾಯಿಕವಾಗಿ ಗ್ರಂಥಕರ್ತನೆಂದು ಹೇಳಲಾಗಿದೆ. ಮೋಶೆಯನ್ನು ಈ ಪುಸ್ತಕದ ದೈವ ಪ್ರೇರಿತ ಗ್ರಂಥಕರ್ತನೆಂದು ಪ್ರಶ್ನಾತೀತವಾಗಿ ಅಂಗೀಕರಿಸಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಮೋಶೆಯ ಬರವಣಿಗೆಯ ಚಟುವಟಿಕೆಯ ಬಗ್ಗೆ ಸ್ವತಃ ವಿಮೋಚನಕಾಂಡವೇ ಮಾತನಾಡುತ್ತದೆ. ವಿಮೋಚನಕಾಂಡ 34:27 ರಲ್ಲಿ “ಈ ವಾಕ್ಯಗಳನ್ನು ಬರೆ” ಎಂದು ದೇವರು ಮೋಶೆಗೆ ಆಜ್ಞಾಪಿಸುತ್ತಾನೆ. ಇನ್ನೊಂದು ವಾಕ್ಯಭಾಗವು ದೇವರ ಆಜ್ಞೆಗೆ ವಿಧೇಯನಾಗಿ “ಮೋಶೆಯು ಯೆಹೋವನ ಆಜ್ಞೆಗಳನ್ನೆಲ್ಲಾ ಬರೆದನು” ಎಂದು ನಮಗೆ ಹೇಳುತ್ತದೆ (24:4). ವಿಮೋಚನಕಾಂಡ ಗ್ರಂಥದಲ್ಲಿ ಕಂಡುಬರುವ ವಿಷಯಗಳನ್ನು ಮೋಶೆಯ ಬರೆದನು ಎಂದು ಈ ವಚನಗಳು ಸೂಚಿಸುತ್ತವೆ ಎಂದು ಊಹಿಸುವುದು ಸಮಂಜಸವಾಗಿದೆ. ಎರಡನೆಯದಾಗಿ, ಮೋಶೆಯು ವಿಮೋಚನಕಾಂಡದಲ್ಲಿ ವಿವರಿಸಲಾಗಿರುವ ಘಟನೆಗಳಲ್ಲಿ ಪಾಲ್ಗೊಂಡಿದ್ದನು ಅಥವಾ ಸಹಭಾಗಿಯಾಗಿದ್ದನು. ಅವನು ಫರೋಹನ ಆಸ್ಥಾನದಲ್ಲಿ ವಿದ್ಯಾಭ್ಯಾಸ ಹೊಂದಿದ್ದನು ಮತ್ತು ಬರೆಯುವ ಅರ್ಹತೆಯುಳ್ಳವನಾಗಿದ್ದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,446 - 1,405 ರ ನಡುವಿನ ಸಮಯ.
ಇಸ್ರಾಯೇಲರು ಈ ದಿನಾಂಕಕ್ಕಿಂತ ಮುಂಚೆ 40 ವರ್ಷಗಳು ತಮ್ಮ ಅಪನಂಬಿಗಸ್ತಿಕೆಯಿಂದ ಅರಣ್ಯದಲ್ಲಿ ಅಲೆದಾಡಿದರು. ಬಹುಶಃ ಈ ಪುಸ್ತಕದ ಬರವಣಿಗೆಯ ಅತ್ಯಂತ ಸೂಕ್ತವಾದ ಸಮಯವು ಇದಾಗಿರಬಹುದು.
ಸ್ವೀಕೃತದಾರರು
ಈ ಪುಸ್ತಕದ ಸ್ವೀಕೃತದಾರರು ವಿಮೋಚನಕಾಂಡದಲ್ಲಿ ಬಿಡುಗಡೆಯಾದ ಸಂತತಿಯವರೇ ಆಗಿರಬಹುದು. ಮೋಶೆಯು ಐಗುಪ್ತದಿಂದ ಹೊರಗೆ ಕರೆತಂದ ಸೀನಾಯಿ ಸಮುದಾಯಕ್ಕೆ ವಿಮೋಚನಕಾಂಡವನ್ನು ಬರೆದನು (ವಿಮೋ 17:14; 24: 4; 34: 27-28).
ಉದ್ದೇಶ
ಇಸ್ರಾಯೇಲರು ಹೇಗೆ ಯೆಹೋವನ ಜನರಾದರು ಎಂಬುದನ್ನು ನಿರೂಪಣೆಯ ರೂಪದಲ್ಲಿ ಪ್ರತಿಪಾದಿಸುತ್ತದೆ ಮತ್ತು ಆ ಜನಾಂಗವು ದೇವರ ಜನರಾಗಿ ಜೀವಿಸಲು ಬೇಕಾದ ಒಡಂಬಡಿಕೆಯ ನಿಯಮಗಳನ್ನು ಪ್ರಸ್ತಾಪಿಸುತ್ತದೆ. ವಿಮೋಚನಕಾಂಡವು ಇಸ್ರಾಯೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡ ನಂಬಿಗಸ್ತನು, ಪ್ರರಾಕ್ರಮಿಯು, ರಕ್ಷಿಸುವವನು, ಪರಿಶುದ್ಧನು ಆದ ದೇವರ ಗುಣಲಕ್ಷಣವನ್ನು ವರ್ಣಿಸುತ್ತದೆ. ದೇವರ ಗುಣಲಕ್ಷಣವು ದೇವರ ಹೆಸರಿನಿಂದಲೂ ದೇವರ ಕ್ರಿಯೆಗಳಿಂದಲೂ ತೋರಿಬರುತ್ತದೆ. ಅಬ್ರಹಾಮನ ವಂಶದವರನ್ನು ಐಗುಪ್ತದ ಬಂಧನದಿಂದ ಬಿಡಿಸಿದಾಗ ದೇವರು ಅಬ್ರಹಾಮನಿಗೆ ಮಾಡಿದ್ದ ವಾಗ್ದಾನವು ಹೇಗೆ ನೆರವೇರಿತ್ತು ಎಂಬುದನ್ನು ಇದು ತೋರಿಸುತ್ತದೆ (ಆದಿ 15:12-16). ಇದು ಆದುಕೊಂಡ ಜನಾಂಗವಾದ ಒಂದು ಕುಟುಂಬದ ಕಥೆಯಾಗಿದೆ (ವಿಮೋ 2:24; 6:5; 12:37). ಐಗುಪ್ತದಿಂದ ಹೊರಟು ಹೋದ ಇಬ್ರಿಯರ ಸಂಖ್ಯೆಯು ಎರಡು ರಿಂದ ಮೂರು ದಶಲಕ್ಷಗಳಷ್ಟು ಇರಬಹುದು.
ಮುಖ್ಯಾಂಶ
ಬಿಡುಗಡೆ
ಪರಿವಿಡಿ
1. ಪೀಠಿಕೆ — 1:1-2:25
2. ಇಸ್ರಾಯೇಲರ ಬಿಡುಗಡೆ — 3:1-18:27
3. ಸೀನಾಯಿ ಬೆಟ್ಟದಲ್ಲಿ ಕೊಟಲ್ಪಟ್ಟ ಒಡಂಬಡಿಕೆ — 19:1-24:18
4. ವೈಭವಭರಿತ ದೇವದರ್ಶನ ಗುಡಾರ — 25:1-31:18
5. ದ್ರೋಹದ ಪರಿಣಾಮವಾಗಿ ದೇವರಿಂದ ಹಿಂಜರಿಯುವಿಕೆ — 32:1-34:35
6. ವೈಭವಭರಿತ ದೇವದರ್ಶನ ಗುಡಾರದ ನಿರ್ಮಾಣ — 35:1-40:38

1
ಐಗುಪ್ತ ದೇಶದಲ್ಲಿ ಇಸ್ರಾಯೇಲರು ಹಿಂಸಿಸಲ್ಪಟ್ಟರು
1 ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು: 2 ರೂಬೇನ್, ಸಿಮೆಯೋನ್, ಲೇವಿ, ಯೆಹೂದ, 3 ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್, 4 ದಾನ್, ಗಾದ್, ನಫ್ತಾಲಿ ಮತ್ತು ಆಶೇರ್. 5 ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು.

6 ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು. 7 ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು. 8 ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು. 9 ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ. 10 ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ 11 ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು. 12 ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು. 13 ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು. 14 ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು. 15 ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು. 16 ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು. 17 ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು. 18 ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು. 19 ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು. 20 ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು. 21 ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು.

22 ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.

ವಿಮೋಚನಕಾಂಡ 2 ->