Link to home pageLanguagesLink to all Bible versions on this site
9
ಎಲ್ಲರ ಅಂತ್ಯ ಸ್ಥಿತಿಯು ಒಂದೇ
1 ಇವೆಲ್ಲವುಗಳನ್ನು ನನ್ನ ಮನಸ್ಸಿನಲ್ಲಿ ವಿಚಾರಿಸಿಕೊಂಡು ಒಂದು ತೀರ್ಮಾನಕ್ಕೆ ಬಂದೆನು. ಅದೇನೆಂದರೆ ನೀತಿವಂತನ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಯಾವ ಮನುಷ್ಯನೂ ತನ್ನ ಮುಂದಿರುವ ಪ್ರೀತಿಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.

2 ಎಲ್ಲವುಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು.

ನೀತಿವಂತನಿಗೂ ಮತ್ತು ದುಷ್ಟನಿಗೂ,
ಒಳ್ಳೆಯವನಿಗೂ ಮತ್ತು ಕೆಟ್ಟವನಿಗೂ,
ಶುದ್ಧನಿಗೂ ಮತ್ತು ಅಶುದ್ಧನಿಗೂ,
ಯಜ್ಞವನ್ನು ಅರ್ಪಿಸುವವನಿಗೂ ಮತ್ತು ಅರ್ಪಿಸದವನಿಗೂ ಒಂದೇ ಗತಿಯಾಗುವುದು.
ಒಳ್ಳೆಯವನು ಹೇಗೋ ಹಾಗೆಯೇ ಪಾಪಿಯೂ ಇರುವನು.
ಆಣೆಯಿಡುವವನು ಹೇಗೋ ಹಾಗೆಯೇ ಆಣೆಗೆ ಭಯಪಡುವವನೂ ಇರುವನು.

3 ಈ ಲೋಕದಲ್ಲಿ ನಡೆಯುವ ಎಲ್ಲಾ ಸಂಗತಿಗಳಿಗೂ ಕೆಟ್ಟ ಪ್ರತಿಫಲ ಉಂಟು ಮತ್ತು ಎಲ್ಲರಿಗೂ ಒಂದೇ ಗತಿಯಾಗುವುದು. ಇದಲ್ಲದೆ ಮನುಷ್ಯರ ಹೃದಯದಲ್ಲಿ ಕೆಟ್ಟತನವು ತುಂಬಿದೆ. ಅವರು ಬದುಕಿರುವ ತನಕ ಹುಚ್ಚುತನವು ಅವರ ಮನಸ್ಸನ್ನು ಹಿಡಿದಿರುವುದು. ಅನಂತರ ಅವರು ಸಾಯುತ್ತಾರೆ.

4 ಜೀವಿತರ ಗುಂಪಿನಲ್ಲಿ ಸೇರಿದವನಿಗೆ ನಿರೀಕ್ಷೆಯುಂಟು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.

5 ಜೀವಿಸುವವರಿಗೆ ಸಾಯುತ್ತೇವೆಂಬ ತಿಳಿವಳಿಕೆಯು ಉಂಟು.
ಸತ್ತವರಿಗೋ ಯಾವ ತಿಳಿವಳಿಕೆಯೂ ಇಲ್ಲ.
ಅವರಿಗೆ ಇನ್ನು ಮೇಲೆ ಪ್ರತಿಫಲವು ಇಲ್ಲ.
ಅವರ ಜ್ಞಾಪಕವೇ ಇಲ್ಲ.
6 ಅವರು ಸತ್ತಾಗಲೇ ಅವರ ಪ್ರೀತಿಯೂ,
ಹಗೆಯೂ, ಹೊಟ್ಟೆಕಿಚ್ಚು ಅಳಿದುಹೋಗಿವೆ.
ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ
ಅವರಿಗೆ ಇನ್ನೆಂದಿಗೂ ಪಾಲು ಇಲ್ಲ.

7 ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು. ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ. ದೇವರು ನಿನ್ನ ಕೆಲಸಗಳನ್ನು ಈಗ ಒಪ್ಪಿಕೊಳ್ಳುತ್ತಾನೆ. 8 ನಿನ್ನ ಬಟ್ಟೆಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಗೆ ಎಣ್ಣೆಯ ಕೊರತೆ ಇಲ್ಲದಿರಲಿ.

9 ಲೋಕದೊಳಗೆ ದೇವರು ನಿನಗೆ ನೇಮಿಸಿರುವ ವ್ಯರ್ಥ ಜೀವಮಾನದ ವ್ಯರ್ಥ ದಿನಗಳೆಲ್ಲಾ ನಿನ್ನ ಪ್ರಿಯಪತ್ನಿಯೊಡನೆ ಸುಖದಿಂದ ಬದುಕು. ನಿನ್ನ ಬಾಳಿನಲ್ಲಿಯೂ, ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನ್ನ ಪಾಲಾಗಿದೆ. 10 ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಸೇರಬೇಕಾದ ಸಮಾಧಿಯಲ್ಲಿ ಯಾವ ಕೆಲಸವೂ, ಯುಕ್ತಿಯೂ, ತಿಳಿವಳಿಕೆಯೂ, ಜ್ಞಾನವೂ ಇರುವುದಿಲ್ಲ.

11 ನಾನು ಲೋಕದಲ್ಲಿ ತಿರುಗಿ ದೃಷ್ಟಿಸಲು

ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ.
ಬಲಿಷ್ಠರಿಗೆ ಯುದ್ಧದಲ್ಲಿ ಜಯವಿಲ್ಲ.
ಜ್ಞಾನಿಗಳಿಗೆ ಅನ್ನ ಸಿಕ್ಕದು.
ವಿವೇಕಿಗಳಿಗೆ ಧನ ಲಭಿಸದು.
ಪ್ರವೀಣರಿಗೆ ದಯೆ ದೊರಕದು.
ಕಾಲವೂ, ಗತಿಯೂ ಅವರೆಲ್ಲರಿಗೆ ಸಂಭವಿಸುತ್ತದೆ.
12 ಮನುಷ್ಯನೋ ತನ್ನ ಕಾಲ ಗತಿಯನ್ನು ತಿಳಿಯನಷ್ಟೆ.
ಮೀನುಗಳು ಕೆಟ್ಟ ಬಲೆಗೂ,
ಪಕ್ಷಿಗಳು ಉರುಲಿನಲ್ಲಿ ಸಿಕ್ಕಿಬೀಳುವ ಹಾಗೆ
ಮನುಷ್ಯರು ಪ್ರಾಣಿಗಳ ಹಾಗೆ ತಮ್ಮ ಮೇಲೆ
ತಟ್ಟನೆ ಬೀಳುವ ಕೇಡಿನ ಕಾಲಕ್ಕೆ ಸಿಕ್ಕಿಕೊಳ್ಳುವರು.
ದಡ್ಡತನಕ್ಕಿಂತ ಜ್ಞಾನ ಲೇಸು
13 ನಾನು ಲೋಕದಲ್ಲಿ ಜ್ಞಾನವನ್ನು ಈ ವಿಧವಾಗಿಯೂ ಕಂಡುಕೊಂಡೆನು. ಅದು ದೊಡ್ಡದೆಂದು ತೋಚಿತು. 14 ಇಗೋ, ಒಂದು ಚಿಕ್ಕ ಪಟ್ಟಣ. ಅದರಲ್ಲಿ ಸ್ವಲ್ಪ ಜನರು ಇದ್ದರು. ಒಬ್ಬ ದೊಡ್ಡ ಅರಸನು ಅದಕ್ಕೆ ವಿರುದ್ಧವಾಗಿ ಬಂದು ಮುತ್ತಿಗೆ ಹಾಕಿ ಅಲ್ಲಿ ದೊಡ್ಡ ದಿಬ್ಬಗಳನ್ನು ಹಾಕಿದನು. 15 ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು. ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ.

16 ನಾನು ಇದನ್ನು ನೋಡಿ ಬಲಕ್ಕಿಂತ ಜ್ಞಾನವೇ ಶ್ರೇಷ್ಠ, ಆದರೆ ಜನರು ಬಡವನ ಜ್ಞಾನವನ್ನು ತಾತ್ಸಾರ ಮಾಡಿ ಅವನ ಮಾತುಗಳನ್ನು ಗಮನಿಸುವುದಿಲ್ಲ ಅಂದುಕೊಂಡೆನು.

17 ಹುಚ್ಚರನ್ನು ಆಳುವವನ ಕೂಗಿಗಿಂತ ಜ್ಞಾನಿಯ
ಮೆಲ್ಲನೆಯ ಮಾತುಗಳು ಕಿವಿಗೆ ಕೇಳಿಸುತ್ತದೆ.
18 ಯುದ್ಧದ ಆಯುಧಗಳಿಗಿಂತಲೂ ಜ್ಞಾನವೇ ಉತ್ತಮ.
ಆದರೆ ಒಬ್ಬ ಪಾಪಿಯು ಬಹಳ ಶುಭವನ್ನು ಹಾಳುಮಾಡುತ್ತಾನೆ.

<- ಪ್ರಸಂಗಿ 8ಪ್ರಸಂಗಿ 10 ->