4 ಆ ನಗರಗಳ ವಿವರ ಹೀಗಿದೆ, ಯಾವನಾದರೂ ದ್ವೇಷವಿಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 5 ಉದಾಹರಣೆ, ಒಬ್ಬ ಮನುಷ್ಯನು ಕಟ್ಟಿಗೆಯನ್ನು ಕಡಿಯಬೇಕೆಂದು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋಗಿ, ಅಲ್ಲಿ ಒಂದು ಮರವನ್ನು ಕಡಿಯಬೇಕೆಂದು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿಯು ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿದ್ದರಿಂದ ಅವನು ಸತ್ತರೆ, ಹೊಡೆದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 6 ಸತ್ತವನ ಮೇಲೆ ಅವನಿಗೆ ಮೊದಲು ದ್ವೇಷವಿಲ್ಲದ್ದರಿಂದ ಮತ್ತು ಅವನನ್ನು ಸಾಯಿಸುವ ಉದ್ದೇಶವಿಲ್ಲದ ಕಾರಣ ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯಮಾಡಿದವನಿಗೆ ಮುಯ್ಯಿತೀರಿಸುವ ಹಂಗುಳ್ಳ ಸಮೀಪ ಬಂಧುವು ಇನ್ನು ಕೋಪದಿಂದ ಉರಿಯುತ್ತಿರುವಾಗಲೇ ಅವನನ್ನು ಹಿಂದಟ್ಟಿ ಹೋಗಬಹುದು ಮತ್ತು ಮಾರ್ಗ ದೂರವಾಗಿರುವ ಪಕ್ಷಕ್ಕೆ ಅವನನ್ನು ಹಿಡಿದು ಕೊಂದು ಹಾಕಿಬಿಡಬಹುದು. 7 ಈ ಕಾರಣದಿಂದ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕೆಂದು ಆಜ್ಞಾಪಿಸಿದ್ದೇನೆ.
8 ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ, ತಾನು ನಿಮ್ಮ ಪೂರ್ವಿಕರಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವಾಗ, ಇನ್ನೂ ಮೂರು ನಗರಗಳನ್ನು ನಿಮಗಾಗಿ ಗೊತ್ತುಮಾಡಬೇಕು. ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ, 9 ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನು ಹೇಳುವ ಮಾರ್ಗದಲ್ಲೇ ಯಾವಾಗಲೂ ನಡೆಯುವುದಾದರೆ, ಆಗ ಯೆಹೋವನು ಈ ಮೂರು ನಗರಗಳನ್ನು ನಿಮಗೆ ಕೊಡುವನು. 10 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗದಂತೆ; ಆ ದೋಷವು ನಿಮ್ಮದಾಗದಂತೆ ನೀವು ಹೀಗೆ ಮಾಡಬೇಕು.
11 ಆದರೆ ಯಾವನಾದರೂ ಒಬ್ಬನಲ್ಲಿ ದ್ವೇಷವನ್ನೇ ಇಟ್ಟು ಸಮಯನೋಡಿಕೊಂಡು, ಅವನ ಮೇಲೆ ಬಿದ್ದು ಅವನನ್ನು ಹೊಡೆದು ಕೊಂದ ತರುವಾಯ ಈ ಪಟ್ಟಣಗಳಲ್ಲಿ 12 ಒಂದಕ್ಕೆ ಓಡಿಹೋದರೆ, ಅವನ ಊರಿನ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ ಅವನಿಗೆ ಮರಣಶಿಕ್ಷೆಯಾಗುವಂತೆ ಮುಯ್ಯಿತೀರಿಸುವ ಹಂಗುಳ್ಳವನ ಕೈಗೆ ಒಪ್ಪಿಸಬೇಕು. 13 ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನನ್ನು ಇಸ್ರಾಯೇಲರಲ್ಲಿ ಉಳಿಯದಂತೆ ಮಾಡಬೇಕು.
- a ಅಥವಾ ದೂರವನ್ನು ಅಳತೆ ಮಾಡು.