17 “ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು. 18 ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು. 19 ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ 20 ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು. 21 ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. 22 ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು. 23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ. 24 ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು. 25 ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ. 26 ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.
<- ಅಪೊಸ್ತಲರ ಕೃತ್ಯಗಳು 2ಅಪೊಸ್ತಲರ ಕೃತ್ಯಗಳು 4 ->- a ಮನುಷ್ಯನನ್ನು