5 ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು. 6 ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ, 7 ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು. 8 ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು. 9 ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು, 10 ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು. 11 ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.
12 ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು; 13 “ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು. 14 ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ. 15 ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ, 16 ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು. 17 ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
18 ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು. 19 ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು. 20 ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ, 21 “ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು, 22 ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.
24 ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು. 25 ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು. 26 ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು. 27 ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು. 28 ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು.
<- ಅಪೊಸ್ತಲರ ಕೃತ್ಯಗಳು 17ಅಪೊಸ್ತಲರ ಕೃತ್ಯಗಳು 19 ->