8 ಅದಕ್ಕೆ ನಾನು; “ಬೇಡವೇ ಬೇಡ, ಕರ್ತನೇ, ಹೊಲೆಯಾದ ಪದಾರ್ಥವಾಗಲಿ, ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ” ಅಂದೆನು.
9 ಅದಕ್ಕೆ; “ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆ ಎನ್ನಬಾರದು” ಎಂಬುದಾಗಿ ಎರಡನೆಯ ಸಾರಿಯೂ ಆಕಾಶದಿಂದ ವಾಣಿಯಾಯಿತು. 10 ಹೀಗೆ ಮೂರು ಸಾರಿ ಆಯಿತು. ಅನಂತರ ಎಲ್ಲವೂ ತಿರುಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
11 ಆ ಕ್ಷಣದಲ್ಲೇ ಮೂವರು ಪುರುಷರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು. 12 ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು. 13 ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು. 14 ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.
15 ನಾನು ಮಾತನಾಡುವುದಕ್ಕೆ ಪ್ರಾರಂಭಿಸಿದಾಗ, ಪವಿತ್ರಾತ್ಮವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು. 16 ಆಗ; “ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಕರ್ತನು ಹೇಳಿದ ಮಾತುಗಳು ನನ್ನ ನೆನಪಿಗೆ ಬಂದಿತು. 17 ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.
18 ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.