3 ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗನು. 4 ಬಹು ಯುಕ್ತಿವಂತನಾದ ಇವನು ಒಂದು ದಿನ ಅಮ್ನೋನನನ್ನು, “ರಾಜಪುತ್ರನೇ ನೀನು ದಿನೇ ದಿನೇ ಕ್ಷೀಣನಾಗುತ್ತಾ ಬರುವುದೇಕೆ? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಲು ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹ ಉಂಟಾಗಿದೆ” ಎಂದು ಉತ್ತರ ಕೊಟ್ಟನು. 5 ಆಗ ಯೋನಾದಾಬನು ಅವನಿಗೆ, “ನೀನು ಅಸ್ವಸ್ಥನಾದವನಂತೆ ಹಾಸಿಗೆಯ ಮೇಲೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ನೋಡುವುದಕ್ಕೆ ಬಂದಾಗ ಅವನಿಗೆ, ‘ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸು. ಆಕೆ ನನ್ನೆದುರಿನಲ್ಲಿಯೆ ಸಿದ್ಧಮಾಡಿ, ತನ್ನ ಕೈಯಿಂದಲೇ ಊಟಮಾಡಿಸಲಿ’ ಎಂದು ಹೇಳು” ಎಂದನು.
6 ಅಮ್ನೋನನು ಅಸ್ವಸ್ಥನಾದವನಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನ್ನ ಬಳಿಗೆ ಕಳುಹಿಸು. ಆಕೆ ನನಗೋಸ್ಕರ ನನ್ನ ಕಣ್ಣ ಮುಂದೆಯೇ ಆಹಾರವನ್ನು ಸಿದ್ಧಮಾಡಿಕೊಡುವುದಾದರೆ ಊಟಮಾಡುವೆನು” ಎಂದು ಹೇಳಿದನು. 7 ಆಗ ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಆಹಾರವನ್ನು ಸಿದ್ಧಮಾಡು” ಎಂದು ಹೇಳಿದನು. 8 ಕೂಡಲೆ ಆಕೆಯು ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು. ಅವನು ಮಲಗಿದ್ದನು. ಆಕೆಯು ಹೋಗಿ ಹಿಟ್ಟು ತೆಗೆದುಕೊಂಡು ನಾದಿ, ಅವನ ಕಣ್ಣ ಮುಂದೆಯೇ ರೊಟ್ಟಿಗಳನ್ನು ಮಾಡಿದಳು. 9 ಅನಂತರ ಆಕೆಯು ಅವುಗಳನ್ನು ಪಾತ್ರೆಯಿಂದ ತೆಗೆದು, ಅವನ ಮುಂದೆ ಇಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು. 10 ಎಲ್ಲರೂ ಹೋದ ಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಆಹಾರವನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು. 11 ಕೂಡಲೆ ಅವನು ಆಕೆಯನ್ನು ಹಿಡಿದು “ನನ್ನ ತಂಗಿಯೇ ಬಂದು ನನ್ನ ಸಂಗಡ ಮಲಗಿಕೋ” ಎಂದನು. 12 ಆಕೆಯು; “ಅಣ್ಣನೇ, ಬೇಡ, ನನ್ನನ್ನು ಅಪಮಾನಪಡಿಸಬೇಡ, ಇಸ್ರಾಯೇಲರಲ್ಲಿ ಇಂಥ ನೀಚಕಾರ್ಯವು ನಡೆಯಬಾರದು. ಇಂಥ ಅವಮಾನಕರವಾದ ಕೆಲಸವನ್ನು ಮಾಡಬೇಡ. 13 ಈ ಅಪಮಾನವನ್ನು ನಾನು ಮರೆಮಾಡುವುದಾದರೂ ಹೇಗೆ? ನಿನಗಂತೂ ಇಸ್ರಾಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತನಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು” ಎಂದಳು. 14 ಆದರೆ ಅವನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು. 15 ಇದಾದ ಮೇಲೆ ಅವನಿಗೆ ಆಕೆಯ ಮೇಲೆ ದ್ವೇಷಹುಟ್ಟಿತು. ಅವಳ ಬಗ್ಗೆ ಇದ್ದ ಪ್ರೀತಿಗಿಂತ ಆಕೆಯ ಮೇಲಿನ ದ್ವೇಷವೇ ಹೆಚ್ಚಾಯಿತು. 16 ಅಮ್ನೋನನು ಆಕೆಗೆ, “ಎದ್ದು ಹೋಗು” ಎಂದು ಹೇಳಿದಾಗ ಆಕೆಯು, “ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ” ಅಂದಳು. 17 ಆದರೆ ಅವನು ಆಕೆಯ ಮಾತನ್ನು ಕೇಳದೆ, ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದವನ್ನು ಮುಚ್ಚು” ಎಂದು ಆಜ್ಞಾಪಿಸಿದನು. 18 ಆಕೆಯು ನಾನಾ ವರ್ಣವುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಇದೇ ತರಹದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಆತನ ಸೇವಕರು ಆಕೆಯನ್ನು ಹೊರಗೆ ಕಳುಹಿಸಿ ಕದವನ್ನು ಮುಚ್ಚಿದನು. 19 ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು ನಿಲುವಂಗಿಯನ್ನು ಹರಿದುಕೊಂಡು ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು. 20 ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣನಾದ ಅಮ್ನೋನನು ನಿನ್ನನ್ನು ಸಂಗಮಿಸಿದನೋ? ತಂಗಿ, ಈಗ ಸುಮ್ಮನಿರು. ಅವನು ನಿನ್ನ ಅಣ್ಣನಲ್ಲವೋ? ಈ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದು ಹೇಳಿದನು. ತಾಮಾರಳು ಒಂಟಿಯಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಮಾಡಿದಳು. 21 ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು. 22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.