6 ತಾವು ದಾವೀದನ ಕೋಪಕ್ಕೂ, ಅಸಮಾಧಾನಕ್ಕೂ ಗುರಿಯಾಗಿದ್ದೇವೆ ಎಂದು ತಿಳಿದು ಅಮ್ಮೋನಿಯರು ಬೇತ್ ರೆಹೋಬ್ ಮತ್ತು ಚೋಬಾ ಎಂಬ ಪಟ್ಟಣಗಳಿಂದ ಅರಾಮ್ಯರ ಇಪ್ಪತ್ತು ಸಾವಿರ ಕಾಲಾಳುಗಳನ್ನೂ, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನೂ ಮತ್ತು ಟೋಬ್ ದೇಶದಿಂದ ಹನ್ನೆರಡು ಸಾವಿರ ದಂಡಾಳುಗಳನ್ನೂ ಹಣಕೊಟ್ಟು ತರಿಸಿದನು 7 ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ, ಎಲ್ಲಾ ಶೂರ ಸೈನಿಕರನ್ನೂ ಕಳುಹಿಸಿದನು. 8 ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರ ಬಾಗಿಲಿನ ಬಳಿಯಲ್ಲಿ ವ್ಯೂಹರಚಿಸಿದರು. ಚೋಬ, ರೆಹೋಬ್ ಎಂಬ ಸ್ಥಳಗಳ ಅರಾಮ್ಯರೂ ಟೋಬ್ ಮತ್ತು ಮಾಕಾ ದೇಶಗಳವರೂ ಪ್ರತ್ಯೇಕವಾಗಿ ಮೈದಾನದಲ್ಲಿ ಇಳಿದುಕೊಂಡಿದ್ದರು.
9 ಯೋವಾಬನು ತನ್ನ ಮುಂದೆಯೂ, ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಸೈನಿಕರನ್ನು ಆರಿಸಿಕೊಂಡು, ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು. 10 ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟನು.
11 ಯೋವಾಬನು ಅವನಿಗೆ, “ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ. ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು. 12 ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ ಮತ್ತು ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ನಮ್ಮ ಶೌರ್ಯವನ್ನು, ಪೌರುಷವನ್ನು ತೋರಿಸೋಣ. ಯೆಹೋವನು ತನ್ನ ಚಿತ್ತದಂತೆ ಮಾಡಲಿ” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.
13 ಯೋವಾಬನು ಅವನ ಜನರು ಅರಾಮ್ಯರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು. 14 ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅಬೀಷೈಯ ಎದುರಿನಿಂದ ಓಡಿಹೋಗಿ, ಪಟ್ಟಣವನ್ನು ಪ್ರವೇಶಿಸಿದರು. ಯೋವಾಬನು ಅಮ್ಮೋನಿಯರೊಡನೆ ಯುದ್ಧ ಮಾಡುವುದನ್ನು ಬಿಟ್ಟು ಯೆರೂಸಲೇಮಿಗೆ ಹೋದನು.
15 ಅರಾಮ್ಯರಿಗೆ ತಮ್ಮ ಸೈನ್ಯವು ಇಸ್ರಾಯೇಲ್ಯರಿಂದ ಅಪಜಯಹೊಂದಿತೆಂದು ಗೊತ್ತಾದಾಗ ಅವರೆಲ್ಲರೂ ಒಟ್ಟಾಗಿ ಕೂಡಿಬಂದರು. 16 ಹದದೆಜೆರನು ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಬರಲು ಹೇಳಿ ಕಳುಹಿಸಿದನು. ಅವರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಧಿಪತಿಯಾದ ಶೋಬಕನು ಅವರ ನಾಯಕನಾದನು.
17 ಈ ಸುದ್ದಿಯು ದಾವೀದನಿಗೆ ತಲುಪಿದಾಗ ಅವನು ಇಸ್ರಾಯೇಲರೆಲ್ಲರನ್ನು ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿ ಹೇಲಾಮಿಗೆ ಬಂದನು. ಅರಾಮ್ಯರು ವ್ಯೂಹರಚಿಸಿ ದಾವೀದನೊಡನೆ ಯುದ್ಧಕ್ಕೆ ನಿಂತಾಗ, 18 ಅರಾಮ್ಯರು ಇಸ್ರಾಯೇಲ್ಯರ ಮುಂದೆ ಸೋತು ಓಡಿಹೋದರು. ದಾವೀದನು ಅರಾಮ್ಯರ ಏಳುನೂರು ರಥ ಸಾರಥಿಗಳನ್ನು ನಾಶ ಮಾಡಿ, ನಲ್ವತ್ತು ಸಾವಿರ ಮಂದಿ [a]ರಾಹುತರನ್ನು ಹತ್ಯೆಮಾಡಿದನು. ಸೇನಾಧಿಪತಿಯಾದ ಶೋಬಕನು ಗಾಯಗೊಂಡು ಅಲ್ಲೇ ಸತ್ತನು. 19 ಹದದೆಜೆರನಿಗೆ ದಾಸರಾಗಿದ್ದ ಅರಸರೆಲ್ಲರೂ ಇಸ್ರಾಯೇಲ್ಯರಿಂದ ತಾವು ಸೋತುಹೋದೆವೆಂದು ತಿಳಿದು, ಅವರೊಡನೆ ಒಪ್ಪಂದ ಮಾಡಿಕೊಂಡು, ಅವರಿಗೆ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯಮಾಡುವುದಕ್ಕೆ ಧೈರ್ಯದಿಂದ ಮುಂದೆ ಬರಲಿಲ್ಲ.
<- 2 ಸಮುವೇಲನು 92 ಸಮುವೇಲನು 11 ->- a ಅಥವಾ ಕಾಲಾಳುಗಳು.