8 ಐದನೆಯ ತಿಂಗಳಿನ ಏಳನೆಯ ದಿನದಲ್ಲಿ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ ಬಾಬೆಲಿನ ಅರಸನ ಸೇವಕನೂ, ಕಾವಲುದಂಡಿನ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬುವವನು ಯೆರೂಸಲೇಮಿಗೆ ಬಂದನು. 9 ಅವನು ಯೆಹೋವನ ಆಲಯವನ್ನೂ, ಅರಸನ ಅರಮನೆಯನ್ನೂ ಯೆರೂಸಲೇಮಿನ ಎಲ್ಲಾ ದೊಡ್ಡ ಮನೆಗಳನ್ನೂ ಹಾಗೂ ಪಟ್ಟಣದ ಮುಖ್ಯ ಕಟ್ಟಡಗಳನ್ನೂ ಸುಟ್ಟುಬಿಟ್ಟನು. 10 ಅವನ ಜೊತೆಯಲ್ಲಿ ಬಂದಿದ್ದ ಕಸ್ದೀಯರ ಸೈನ್ಯದವರು ಯೆರೂಸಲೇಮಿನ ಸುತ್ತುಗೋಡೆಗಳನ್ನು ಕೆಡವಿದರು. 11 ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ ಮೊದಲೇ ಬಾಬೆಲಿನ ಅರಸನ ಮರೆಹೊಕ್ಕವರನ್ನೂ ಒಟ್ಟಾರೆ ಎಲ್ಲಾ ಜನರನ್ನು ಸೆರೆಹಿಡಿದೊಯ್ದನು. 12 ಹೊಲಗಳನ್ನೂ, ದ್ರಾಕ್ಷಿ ತೋಟಗಳನ್ನೂ, ವ್ಯವಸಾಯಮಾಡುವುದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು. 13 ಕಸ್ದೀಯರು ಯೆಹೋವನ ಆಲಯದಲ್ಲಿದ್ದ ತಾಮ್ರದ ಕಂಬಗಳನ್ನು, ಪೀಠಗಳನ್ನೂ, ಕಡಲಿನ ಆಕಾರದ ಪಾತ್ರೆಯನ್ನೂ ಒಡೆದು ಅವುಗಳ ತಾಮ್ರವನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು. 14 ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ತೆಗೆದುಕೊಂಡು ಹೋದರು. 15 ಕಾವಲುದಂಡಿನ ಅಧಿಪತಿಯು ಬೆಳ್ಳಿಬಂಗಾರದ ಅಗ್ಗಿಷ್ಟಿಕೆ, ಬಟ್ಟಲು ಮೊದಲಾದವುಗಳನ್ನು ತೆಗೆದುಕೊಂಡನು. 16 ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ ಎರಡು ಕಂಬಗಳು, ಕಡಲೆನಿಸಿಕೊಂಡ*ಕಡಲೆನಿಸಿಕೊಂಡ ಕಡಲಿನಾಕರದ. ಪಾತ್ರೆಯು, ಪೀಠಗಳು, ಇವುಗಳಿಗೆ ಲೆಕ್ಕವಿಲ್ಲದಷ್ಟು ತಾಮ್ರವನ್ನು ಬಳಸಲಾಗಿತ್ತು. 17 ಪ್ರತಿಯೊಂದು ಕಂಬವು ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ತಾಮ್ರದ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ತಾಮ್ರದ ಜಾಲರಿಯೂ ದಾಳಿಂಬೆ ಹಣ್ಣುಗಳೂ ಇದ್ದವು. 18 ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡು ಹೋಗಿದ್ದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ಯಾಜಕನಾದ ಚೆಫನ್ಯನು ಮೂರು ಮಂದಿ ದ್ವಾರಪಾಲಕರು, 19 ಸೈನ್ಯ ಸಂಬಂಧವಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದ ಕಂಚುಕಿ, ಪಟ್ಟಣದಲ್ಲಿ ಉಳಿದಿದ್ದ ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಯನ್ನು ಮಾಡುವ ಸೇನಾಧಿಪತಿಯ ಲೇಖಕನು, ಪಟ್ಟಣದಲ್ಲಿದ್ದ ಅರುವತ್ತು ಮಂದಿ ಜನರೂ ಇದ್ದರು. 20 ನಂತರ ನೆಬೂಜರದಾನನು, ಇವರನ್ನೆಲ್ಲಾ ಹಿಡಿದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬೆಲಿನ ಅರಸನಿಗೆ ಒಪ್ಪಿಸಲು, 21 ಬಾಬೆಲಿನ ಅರಸನು ಹಮಾತ್ ಪ್ರದೇಶದ ಅವರನ್ನು ಕತ್ತಿಯಿಂದ ರಿಬ್ಲದಲ್ಲಿ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಯಿತು.
- a ಕಡಲೆನಿಸಿಕೊಂಡ ಕಡಲಿನಾಕರದ.