10 ಅರಸನಾದ ಆಹಾಜನು ಅಶ್ಶೂರದ ಅರಸನಾದ ತಿಗ್ಲತ್ಪಿಲೆಸೆರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು. ಅವನು ಅಲ್ಲಿದ್ದ ಯಜ್ಞವೇದಿಯನ್ನು ಕಂಡು, ಅದರ ಒಂದು ಪ್ರತಿಮೆಯನ್ನೂ, ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ, ಯಾಜಕನಾದ ಊರೀಯನಿಗೆ ಕಳುಹಿಸಿದನು. 11 ಅರಸನಾದ ಆಹಾಜನು ದಮಸ್ಕದಿಂದ ಬರುವಷ್ಟರಲ್ಲಿ ಊರೀಯನು ಅರಸನಿಂದ ತನಗೆ ಬಂದ ಮಾದರಿಯ ಪ್ರಕಾರ ಒಂದು ಯಜ್ಞವೇದಿಯನ್ನು ಮಾಡಿಸಿಟ್ಟಿದ್ದನು. 12 ಅರಸನು ದಮಸ್ಕದಿಂದ ಹಿಂತಿರುಗಿ ಬಂದ ಮೇಲೆ ಆ ಯಜ್ಞವೇದಿಯನ್ನು ಕಂಡು, ಸಮೀಪಕ್ಕೆ ಹೋಗಿ, ಅದರ ಮೇಲೆ ಬಲಿಗಳನ್ನು ಅರ್ಪಿಸಿದನು. 13 ತಾನು ತಂದ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯನೈವೇದ್ಯ ಇವುಗಳನ್ನು ಸಮರ್ಪಿಸಿ ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಅದರ ಮೇಲೆ ಚಿಮುಕಿಸಿದನು. 14 ಇದಲ್ಲದೆ, ಯೆಹೋವನ ಆಲಯಕ್ಕೂ, ತನ್ನ ವೇದಿಗೂ ಮಧ್ಯದಲ್ಲಿದ್ದು ಆ ವರೆಗೂ ಯೆಹೋವನ ಸೇವೆಗೆ ಉಪಯೋಗಿಸಲ್ಪಡುತ್ತಿದ್ದ ತಾಮ್ರ ಯಜ್ಞವೇದಿಯನ್ನೂ ಆಲಯದ ಎದುರಿನಿಂದ ತೆಗೆಯಿಸಿ, ತನ್ನ ಯಜ್ಞವೇದಿಯ ಉತ್ತರ ದಿಕ್ಕಿನಲ್ಲಿಡಿಸಿದನು. 15 ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯಕಾಲದಲ್ಲಿ ಸರ್ವಾಂಗಹೋಮವನ್ನೂ, ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ, ಅರಸನು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ ಇವುಗಳನ್ನೂ, ಜನರು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನೂ ಈ ಮಹಾವೇದಿಯ ಮೇಲೆ ಸಮರ್ಪಿಸಬೇಕು ಮತ್ತು ಸರ್ವಾಂಗಹೋಮಯಜ್ಞಗಳಿಗಾಗಿ ವಧಿಸುವ ಪಶುಗಳ ರಕ್ತವನ್ನು ಇದರ ಮೇಲೆಯೇ ಚಿಮುಕಿಸಬೇಕು. ತಾಮ್ರ ಯಜ್ಞವೇದಿಯನ್ನು ಕುರಿತಾಗಿ ನಾನೇ ಆಲೋಚಿಸಿ ನೋಡಿಕೊಳ್ಳುವೆನು” ಎಂದು ಹೇಳಿದನು.
16 ಯಾಜಕನಾದ ಊರೀಯನು ಅರಸನಾದ ಆಹಾಜನು ಹೇಳಿದಂತೆಯೇ ಮಾಡಿದನು. 17 ಅರಸನಾದ ಆಹಾಜನು ಅಶ್ಶೂರದ ಅರಸನ ನಿಮಿತ್ತವಾಗಿ ಯಜ್ಞವೇದಿಗಳ ಪಟ್ಟಿಗಳನ್ನು ಕತ್ತರಿಸಿದನು, ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು. ಕಡಲೆನಿಸುವ ಪಾತ್ರೆಯನ್ನು ತಾಮ್ರದ ಹೋರಿಗಳ ಮೇಲಣಿಂದ ಇಳಿಸಿ ಕಲ್ಲುಕಟ್ಟೆಗಳ ಮೇಲೆ ಇಡಿಸಿದನು. 18 ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲ್ಪಟ್ಟಿದ್ದ ಮಂಟಪವನ್ನು ಹಾಗೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಅಶ್ಶೂರದ ಅರಸನಾದ ಈ ಆಹಾಜನೇ. 19 ಆಹಾಜನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ್ಯರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. 20 ಆಹಾಜನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಹಿಜ್ಕೀಯನು ಅರಸನಾದನು.
<- 2 ಅರಸುಗಳು 152 ಅರಸುಗಳು 17 ->