Link to home pageLanguagesLink to all Bible versions on this site
11
ತಾನು ಸಾರಿದ ಕ್ರಿಸ್ತನನ್ನು ಕೊರಿಂಥದವರು ಬಿಟ್ಟು ಬೇರೊಂದು ಬೋಧನೆಗೆ ಕಿವಿಗೊಡಬಾರದೆಂದು ಪೌಲನು ಎಚ್ಚರಿಸಿದ್ದು
1 ನಾನು ನನ್ನನ್ನು ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನೀವು ನನ್ನನ್ನು ಸಹಿಸಿಕೊಳ್ಳಿರಿ. 2 ಯಾಕೆಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ [a]ಶುದ್ಧ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿಸಿದ್ದೇನಲ್ಲ. 3 ಆದರೆ [b]ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಗಾಗಿ ಮೋಸಹೋದಳೋ ಹಾಗೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ [c]ಶುದ್ಧತ್ವವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವಾಗಿದೆ. 4 ಯಾಕೆಂದರೆ ಯಾರಾದರು ಬಂದು [d]ನಾವು ಬೋಧಿಸಿದ ಯೇಸುವನ್ನಲ್ಲದೆ ಮತ್ತೊಬ್ಬ ಯೇಸುವನ್ನು ನಿಮಗೆ ಪ್ರಕಟಿಸುವಾಗಲೂ ಇಲ್ಲವೇ [e]ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ, ನೀವು ಒಪ್ಪಿಕೊಳ್ಳದೆ ಇದ್ದ ಬೇರೊಂದು ಸುವಾರ್ತೆಯನ್ನು ಕೇಳುವಾಗಲೂ ನೀವು ಸಹಿಸಿಕೊಳ್ಳುತ್ತಿರುವುದು ಬಹು ಆಶ್ಚರ್ಯ. 5 [f]“ಅತಿಶ್ರೇಷ್ಟರಾದ ಅಪೊಸ್ತಲರು” ಅನ್ನಿಸಿಕೊಳ್ಳುವ ಅವರಿಗಿಂತ ನಾನು ಒಂದರಲ್ಲಾದರೂ ಕಡಿಮೆಯಾದವನಲ್ಲವೆಂದು ಎಣಿಸುತ್ತೇನೆ 6 [g]ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ [h]ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.
ತಾನು ಕೊರಿಂಥದ ಸಭೆಯಿಂದ ಹಣ ಸಹಾಯ ತೆಗೆದುಕೊಳ್ಳದೆ ಹೋದದ್ದಕ್ಕೆ ದೋಷವೆಣಿಸಕೂಡದೆಂದು ಪೌಲನು ಹೇಳುವುದು
7 [i]ನೀವು ಅಭಿವೃದ್ಧಿಹೊಂದಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದರಲ್ಲಿ ಪಾಪಮಾಡಿದ್ದೇನೋ? 8 ನಿಮಗೆ ಸೇವೆಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳಿಂದ ನೆರವು ಪಡೆಯುತ್ತಿದ್ದೆ, ನಿಮಗೋಸ್ಕರ ಇತರ ಸಭೆಗಳಿಂದ ಹಣ ವಸೂಲಿಮಾಡುತ್ತಿದ್ದೆ. 9 ನಾನು ನಿಮ್ಮಲ್ಲಿದ್ದಾಗ [j]ಖರ್ಚಿಗೆ ಏನೂ ಇಲ್ಲದ ಸಮಯದಲ್ಲಿ ಯಾರ ಮೇಲೆಯೂ ಭಾರ ಹಾಕಲಿಲ್ಲ. [k]ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನೂ ಕೊಟ್ಟರು. [l]ನಾನು ನಿಮಗೆ ಯಾವುದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು. ಇನ್ನು ಮೇಲೆಯೂ ನೋಡಿಕೊಳ್ಳುವೆನು. 10 [m]ಈ ನನ್ನ ಹೊಗಳಿಕೆಯನ್ನು ಅಖಾಯದ ಪ್ರಾಂತ್ಯಗಳಲ್ಲಿ ಒಬ್ಬರೂ ತಡೆಯಲಾರರೆಂದು ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ. 11 ನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆ? [n]ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ಇಲ್ಲ, ನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು [o]ದೇವರೇ ಬಲ್ಲನು. 12 ಕೆಲವರು ತಾವು ಮಾಡುತ್ತಿರುವ ಕಾರ್ಯ, ನಾವು ಅಪೊಸ್ತಲರಾಗಿ ಮಾಡುತ್ತಿರುವ ಕಾರ್ಯಕ್ಕೆ ಸರಿಸಮವೆಂದು ವಾದಿಸಲು ಅವಕಾಶವನ್ನು ಹುಡುಕುತ್ತಿದ್ದಾರೆ. ಹುಡುಕುವವರಿಗೆ ಯಾವ ಆಸ್ಪದವೂ ಸಿಕ್ಕದಂತೆ ನಾನೀಗ ಮಾಡುತ್ತಿರುವುದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ. 13 ಆದರೆ ಅಂಥವರು [p]ಸುಳ್ಳು ಅಪೊಸ್ತಲರೂ, [q]ಮೋಸಗಾರರಾದ ಕೆಲಸದವರೂ, ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ. 14 ಇದೇನೂ ಆಶ್ಚರ್ಯವಲ್ಲ. ಸೈತಾನನು ತಾನೇ ಪ್ರಕಾಶ ರೂಪವುಳ್ಳ [r]ದೇವದೂತನ ವೇಷವನ್ನು ಹಾಕಿಕೊಳ್ಳುವಾಗ, 15 ಅವನ ಸೇವಕರೂ ಸಹ ನೀತಿಗೆ ಸೇವಕರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವುದು ಆಶ್ಚರ್ಯವೇನಲ್ಲ. [s]ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕಂತೆಯೇ ಇರುವುದು.
ತಾನು ಕ್ರಿಸ್ತನ ಸೇವೆಯಲ್ಲಿ ಪಟ್ಟ ಶ್ರಮೆಯೂ ಕ್ರಿಸ್ತನಿಂದ ಹೊಂದಿದ ದರ್ಶನಗಳೂ ಬಹು ಹೆಚ್ಚೆಂದು ಪೌಲನು ಹೇಳುತ್ತಿರುವುದು
16 [t]ಯಾರೂ ನನ್ನನ್ನು ಬುದ್ಧಿಹೀನನೆಂದು ತಿಳಿಯಬಾರದೆಂದು ತಿರುಗಿ ಹೇಳುತ್ತೇನೆ. ಹಾಗೆ ನೆನಸಿದರೂ ಚಿಂತೆಯಿಲ್ಲ. ನನ್ನನ್ನು ಬುದ್ಧಿಹೀನನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮ ಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ. 17 [u]ನಾನು ಈಗ ಆಡುವ ಮಾತುಗಳನ್ನು ಕರ್ತನನ್ನು ಅನುಸರಿಸುವವರಾಗಿ ಆಡದೆ ಭರವಸದಿಂದ ತನ್ನನ್ನು ಹೊಗಳಿಕೊಳ್ಳುವ ಬುದ್ಧಿಹೀನನಂತೆ ಆಡುತ್ತೇನೆ. 18 [v]ಅನೇಕರು ಲೋಕಸಂಬಂಧವಾದ ಕಾರ್ಯಗಳಲ್ಲಿ ಹೊಗಳಿಕೊಳ್ಳುವುದರಿಂದ ನಾನೂ ಹೊಗಳಿಕೊಳ್ಳುತ್ತೇನೆ. 19 [w]ನೀವು ಬುದ್ಧಿವಂತರಾಗಿದ್ದು ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಲ್ಲಾ 20 ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ, ಒಬ್ಬನು ನಿಮ್ಮನ್ನು ನುಂಗಿಬಿಟ್ಟರೂ, ಒಬ್ಬನು ನಿಮ್ಮನ್ನು ಮರಳುಗೊಳಿಸಿ ಹಿಡಿದರೂ, ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ, ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ಸಹಿಸಿಕೊಳ್ಳುತ್ತೀರಲ್ಲಾ.

21 [x]ನಾವು ಬಲವಿಲ್ಲದವರಾಗಿದ್ದೆವೆಂಬುದನ್ನು ನಾಚಿಕೆಗೇಡಿನಿಂದ ಹೇಳುತ್ತಿದ್ದೇನೆ. ಯಾವ ಆಧಾರದಿಂದ ಯಾವನಾದರೂ ದೊಡ್ಡಸ್ತಿಕೆಯಿಂದ ಹೊಗಳಿಕೊಳ್ಳುತ್ತಾನೋ ಅದರಿಂದಲೇ ನಾನು ಹೊಗಳಿಕೊಳ್ಳುವುದಾಗಿ ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. 22 ಅವರು ಇಬ್ರಿಯರೋ? [y]ನಾನೂ ಇಬ್ರಿಯನು. ಅವರು ಇಸ್ರಾಯೇಲ್ಯರೋ? ನಾನೂ ಇಸ್ರಾಯೇಲ್ಯನು. ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು. 23 ಅವರು ಕ್ರಿಸ್ತನ ಸೇವಕರೋ? [z]ಅವರಿಗಿಂತ ನಾನು ಹೆಚ್ಚಾಗಿ ಸೇವೆಮಾಡುವವನಾಗಿದ್ದೇನೆ. ನಾನು ಬುದ್ಧಿ ಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ ಕ್ರಿಸ್ತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, [aa]ಹೆಚ್ಚಾಗಿ ಸೆರೆಮನೆಯ ವಾಸವನ್ನು ಅನುಭವಿಸಿದ್ದೇನೆ, ಮಿತಿಮೀರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ. [bb]ಅನೇಕ ಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡಿದ್ದೇನೆ. 24 ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ [cc]ನಲವತ್ತು ಏಟುಗಳು ಬಿದ್ದವು. 25 [dd]ಮೂರು ಸಾರಿ ಬಾರುಕೋಲಿನಿಂದ ನನ್ನನ್ನು ಹೊಡೆದರು. [ee]ಒಂದು ಸಾರಿ ಜನರು ನನ್ನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. [ff]ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು. ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು. 26 ಕ್ರಿಸ್ತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು. ನದಿಗಳ ಅಪಾಯಗಳೂ, ಕಳ್ಳರ ಅಪಾಯಗಳೂ, [gg]ಸ್ವಂತ ಜನರಿಂದ ಅಪಾಯಗಳೂ, [hh]ಅನ್ಯಜನರಿಂದ ಅಪಾಯಗಳೂ, [ii]ಪಟ್ಟಣದಲ್ಲಿ ಅಪಾಯ, ನಿರ್ಜನ ಸ್ಥಳದಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ, ಸುಳ್ಳು ಸಹೋದರರೊಳಗಿನಿಂದಾದ ಅಪಾಯಗಳೂ ನನಗೆ ಸಂಭವಿಸಿದವು. 27 ಶ್ರಮೆಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ, ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ. 28 ಇಂಥ ಇನ್ನಿತರ ಬೇರೆ ಸಂಗತಿಗಳಲ್ಲದೆ, ಎಲ್ಲಾ ಸಭೆಗಳ ಕುರಿತಾದ ಚಿಂತೆಯು ದಿನದಿನ ನನ್ನನ್ನು ಕಾಡಿಸುತ್ತಿತ್ತು. 29 [jj]ಯಾವನಾದರೂ ಬಲಹೀನನಾಗಿದ್ದರೆ ನಾನೂ ಅವನೊಂದಿಗೆ ಬಲಹೀನನಾಗದೆ ಇದ್ದೆನೋ? ಯಾವನಾದರೂ ತಪ್ಪಿಹೋಗಿದ್ದಲ್ಲಿ ನಾನು ಸಂತಾಪಪಡದೆ ಇದ್ದೆನೋ?

30 [kk] ನಾನು ಹೊಗಳಿಕೊಳ್ಳುವುದ್ದಾದರೆ ನನ್ನ ಬಲಹೀನತೆಯನ್ನು ಕುರಿತೆ ಹೊಗಳಿಕೊಳ್ಳುತ್ತೇನೆ. 31 ನನ್ನ ಮಾತುಗಳು ಸುಳ್ಳಲ್ಲವೆಂಬುದನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನು ನಿರಂತರ ಸ್ತುತಿ ಹೊಂದತಕ್ಕ ದೇವರೇ ಬಲ್ಲನು. 32 [ll]ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಕಾಯುತ್ತಿರಲು 33 ಅವರು ನನ್ನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ ಗೋಡೆಯಲ್ಲಿದ್ದ ಒಂದು ಕಿಟಕಿಯಿಂದ ಇಳಿಸಿಬಿಟ್ಟರು. ಹೀಗೆ ಅವನ ಕೈಯಿಂದ ತಪ್ಪಿಸಿಕೊಂಡು ಓಡಿಹೋದೆನು.

<- 2 ಕೊರಿಂಥದವರಿಗೆ 102 ಕೊರಿಂಥದವರಿಗೆ 12 ->