12 ಇತ್ತ ಮೀಕಾಯೆಹುವನ್ನು ಕರೆಯುವುದಕ್ಕೆ ಬಂದಿದ್ದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ತಿಳಿಸುತ್ತಿದ್ದಾರೆ; ದಯವಿಟ್ಟು ನೀನೂ ಅವರಂತೆ ಶುಭವನ್ನೇ ತಿಳಿಸು” ಎಂದು ಹೇಳಿದನು. 13 ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ನನ್ನ ದೇವರು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು. 14 ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ? ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ? ಹೋಗಬಾರದೋ? ಎಂದು ಕೇಳಿದನು. ಅವನು, ಹೋಗಬಹುದು, ಕೃತಾರ್ಥನಾಗಿ ಬರುವಿರಿ, ವೈರಿಗಳು ನಿನ್ನ ಕೈವಶವಾಗುವರು” ಎಂದು ಹೇಳಿದನು. 15 ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಾನು ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು 16 ಆಗ ಅವನು, “ಇಸ್ರಾಯೇಲರೆಲ್ಲರೂ ಕುರುಬನಿಲ್ಲದ ಕುರಿ ಹಿಂಡುಗಳಂತೆ ಬೆಟ್ಟಗಳಲ್ಲಿ ಚದರಿ ಹೋದದ್ದನ್ನು ಕಂಡೆನು; ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿ ಇರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ” ಎಂಬುದಾಗಿ ಉತ್ತರಕೊಟ್ಟನು. 17 ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಈ ಪ್ರವಾದಿಯು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ, ತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು. 18 ಅದಕ್ಕೆ ಮಿಕಾಯೆಹುವು, “ಅದಿರಲಿ, ಯೆಹೋವನ ವಾಕ್ಯವನ್ನು ಕೇಳಿರಿ, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಡೆಗಳಲ್ಲಿ ನಿಂತಿದ್ದನ್ನೂ ಕಂಡೆನು. 19 ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಇಸ್ರಾಯೇಲರ ಅರಸನಾದ ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸ ಬಲ್ಲಿರಿ?’ ಎಂದು ಕೇಳಿದಾಗ, ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು. 20 ಕಡೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಆತನಿಗೆ, ‘ನಾನು ಹೋಗಿ ಅವನನ್ನು ಪ್ರೇರೇಪಿಸುವೆನು’ ಎಂದಿತು. ‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು, 21 ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳ ಒಳಗೆ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಯೆಹೋವನು ಅದಕ್ಕೆ, ‘ಹೋಗಿ ಅದರಂತೆ ಮಾಡು; ಅವನನ್ನು ಪ್ರೇರೇಪಿಸು ನೀನು ಸಫಲನಾಗುವಿ’ ಎಂದನು. 22 ನೋಡು, ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು, ನಿನ್ನ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು. 23 ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕಾಗಿ ಯಾವ ಮಾರ್ಗವಾಗಿ ಬಂದಿತು?” ಎಂದನು. 24 ಅದಕ್ಕೆ ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು” ಎಂದು ಉತ್ತರ ಕೊಟ್ಟನು. 25 ಆಗ ಇಸ್ರಾಯೇಲರ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪಟ್ಟಣದ ಅಧಿಕಾರಿಯಾದ ಆಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ. 26 ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಹೇಳಿದ್ದಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು. 27 ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ, ನಾನು ನುಡಿದದ್ದು ಯೆಹೋವನ ಮಾತಲ್ಲ” ಎಂದು ಹೇಳಿ, “ಮಹಾ ಜನರೇ, ನನ್ನ ಮಾತನ್ನು ಗಮನದಲ್ಲಿಟ್ಟುಕೊಳ್ಳಿರಿ” ಎಂದು ಕೂಗಿ ಹೇಳಿದನು.
33 ಅರಾಮ್ಯರ ಒಬ್ಬ ಸೈನಿಕನು ಗುರಿಯಿಡದೆ ಸುಮ್ಮನೆ ಒಂದು ಬಾಣವನ್ನೆಸೆಯಲು, ಆ ಬಾಣವು ಇಸ್ರಾಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿದೆ” ಎಂದು ಹೇಳಿದನು. 34 ಆ ದಿನ ಯುದ್ಧವು ಬಹು ಘೋರವಾಗಿದ್ದುದರಿಂದ ಇಸ್ರಾಯೇಲರ ಅರಸನು ಸಾಯಂಕಾಲದವರೆಗೂ ಅರಾಮ್ಯರ ಎದುರಾಗಿ ತನ್ನ ರಥದಲ್ಲೇ ಆತುಕೊಂಡಿರಬೇಕಾಯಿತು. ಸೂರ್ಯಾಸ್ತಮಾನವಾದಾಗ ಅವನು ಸತ್ತನು.
<- 2 ಪೂರ್ವಕಾಲವೃತ್ತಾಂತ 172 ಪೂರ್ವಕಾಲವೃತ್ತಾಂತ 19 ->