8 ಆಸನು ಓದೇದನ ಮಗನಾದ ಅಜರ್ಯ ಪ್ರವಾದಿಯ ಈ ಮಾತುಗಳನ್ನು ಕೇಳಿದಾಗ ಧೈರ್ಯಗೊಂಡನು. ಯೆಹೂದ, ಬೆನ್ಯಾಮೀನ್ ಪ್ರಾಂತ್ಯಗಳಲ್ಲಿಯೂ ತಾನು ಸ್ವಾಧೀನಮಾಡಿಕೊಂಡ ಎಫ್ರಾಯೀಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲಿಯೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದು ಹಾಕಿಸಿದನು. ಯೆಹೋವನ ಆಲಯಕ್ಕೆ ಸೇರಿದ ಮಂಟಪದ ಎದುರಿಗಿದ್ದ ಯೆಹೋವನ ಯಜ್ಞವೇದಿಯನ್ನು ಜೀರ್ಣೋದ್ಧಾರ ಮಾಡಿಸಿದನು. 9 ಆ ಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವುದನ್ನು ನೋಡಿ ಇಸ್ರಾಯೇಲರೊಡನೆ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದ ದೇಶದಲ್ಲಿ ನೆಲಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನೂ ಕರೆಸಿಕೊಂಡನು. 10 ಅವರು ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಯೆರೂಸಲೇಮಿಗೆ ಒಟ್ಟಾಗಿ ಕೂಡಿ ಬಂದರು. 11 ಯೆಹೋವನಿಗಾಗಿ ಆ ದಿನ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯಜ್ಞಮಾಡಿದರು. 12 ಅವರು ತಾವು ಪೂರ್ಣ ಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ತಮ್ಮ ಪೂರ್ವಿಕರ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ ಒಡಂಬಡಿಕೆ ಮಾಡಿದರು. 13 ಇದಲ್ಲದೆ, ತಮ್ಮಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ಭಕ್ತಿಯನ್ನು ಬಿಟ್ಟವರು ಚಿಕ್ಕವರಾಗಲಿ, ದೊಡ್ಡವರಾಗಲಿ, ಗಂಡಸರಾಗಲಿ ಹೆಂಗಸರಾಗಲಿ, ಅವರೆಲ್ಲರನ್ನೂ ಕೊಲ್ಲಲಾಗುವುದು ಎಂದು 14 ತುತ್ತೂರಿ ಕೊಂಬುಗಳನ್ನೂ ಊದಿಸಿ ದೊಡ್ಡ ಅರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು. 15 ಈ ಪ್ರಮಾಣದ ನಿಮಿತ್ತವಾಗಿ ಯೆಹೂದ್ಯರೆಲ್ಲರಿಗೂ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಸಂತೋಷದಿಂದ ಯೆಹೋವನನ್ನು ಬಯಸಿದ ಕಾರಣ ಆತನು ಅವರಿಗೆ ಪ್ರಸನ್ನನಾಗಿ ಎಲ್ಲಾ ಕಡೆಗಳಿಂದಲೂ ಅವರಿಗೆ ಸಮಾಧಾನವನ್ನು ಅನುಗ್ರಹಿಸಿದನು. 16 ಅರಸನಾದ ಆಸನ ಅಜ್ಜಿಯಾದ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿಕೊಂಡಿದ್ದಳು. ಆದುದರಿಂದ ಅವನು ಆಕೆಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಅಲ್ಲದೆ ಆ ಮೂರ್ತಿಯನ್ನು ತೆಗೆದು ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರು ಚೂರು ಮಾಡಿ ಸುಟ್ಟುಹಾಕಿಸಿದನು. 17 ಅವನು ಇಸ್ರಾಯೇಲ್ ಪ್ರಾಂತ್ಯದಲ್ಲಿದ್ದ ಪೂಜಾಸ್ಥಳಗಳನ್ನು ಹಾಳು ಮಾಡದೆ ಇದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ಯಥಾರ್ಥಚಿತ್ತನಾಗಿ ನಡೆದುಕೊಂಡನು. 18 ತನ್ನ ತಂದೆಯೂ ತಾನೂ ದೇವರಿಗೆ ಪ್ರತಿಷ್ಠಿಸಿದ್ದ ಬೆಳ್ಳಿಬಂಗಾರವನ್ನೂ, ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು. 19 ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿರಲಿಲ್ಲ.
<- 2 ಪೂರ್ವಕಾಲವೃತ್ತಾಂತ 142 ಪೂರ್ವಕಾಲವೃತ್ತಾಂತ 16 ->