10 ಸಮುವೇಲನು ಅರಸನನ್ನು ನೇಮಿಸಿಕೊಡು ಎಂದು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ ಅವರಿಗೆ, 11 “[c]ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, [d]ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು. 12 ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು. 13 ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು. 14 [e]ನಿಮ್ಮ ಉತ್ತಮವಾದ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು. 15 ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು. 16 ನಿಮ್ಮ ದಾಸದಾಸಿಯರನ್ನೂ, ಉತ್ತಮವಾದ [f]ಎತ್ತು ಕತ್ತೆಗಳನ್ನೂ ತನ್ನ ಕೆಲಸ ಮಾಡುವುದಕ್ಕಾಗಿ ತೆಗೆದುಕೊಳ್ಳುವನು. 17 ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು. 18 ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ. [g]ಆಗ ಆತನು ನಿಮ್ಮನ್ನು ಲಕ್ಷಿಸುವುದಿಲ್ಲ” ಅಂದನು. 19 ಸಮುವೇಲನು ಎಷ್ಟು ಹೇಳಿದರೂ ಜನರು ಅವನ ಮಾತುಗಳನ್ನು ಕೇಳಲೊಲ್ಲದೆ, “ಇಲ್ಲ; ನಮಗೆ ಅರಸನನ್ನು ನೇಮಿಸಿಕೊಡು; 20 ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು” ಎಂದು ಹೇಳಿದರು. 21 ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ 22 ಆತನು ಅವನಿಗೆ, “[h]ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು” ಎಂದನು. ಆಗ ಸಮುವೇಲನು ಇಸ್ರಾಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ” ಎಂದು ಅಪ್ಪಣೆಕೊಟ್ಟನು.
<- 1 ಸಮುವೇಲನು 71 ಸಮುವೇಲನು 9 ->