13 ದಾವೀದನು ತನಗೂ ಪಾಳೆಯಕ್ಕೂ ತಕ್ಕಷ್ಟು ಅಂತರವಿರುವ ಹಾಗೆ ಸ್ವಲ್ಪ ದೂರಕ್ಕೆ ಹೋಗಿ ಗುಡ್ಡವನ್ನೇರಿ ತುದಿಯಲ್ಲಿ ನಿಂತು, 14 “ಅಬ್ನೇರನೇ ಕಿವಿಗೊಡುವುದಿಲ್ಲವೋ?” ಎಂದು ನೇರನ ಮಗನಾದ ಅವನಿಗೂ, ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, “ಅರಸನನ್ನು ಕೂಗುವ ನೀನಾರು?” ಎಂದು ಕೇಳಿದನು. 15 ದಾವೀದನು ಅಬ್ನೇರನಿಗೆ, “ನೀನು ಶೂರನಲ್ಲವೋ? ಇಸ್ರಾಯೇಲರಲ್ಲಿ ನಿನಗೆ ಸಮಾನನಾದವನು ಯಾರು? ನೀನು ನಿನ್ನ ಒಡೆಯನಾದ ಅರಸನನ್ನು ಯಾಕೆ ಕಾಯಲಿಲ್ಲ. ಜನರಲ್ಲೊಬ್ಬನು ಒಳಕ್ಕೆ ಹೊಕ್ಕು ನಿನ್ನ ಒಡೆಯನಾದ ಅರಸನನ್ನು ಕೊಲ್ಲಬೇಕೆಂದಿದ್ದನು. 16 ನೀನು ಹೀಗೆ ಮಾಡುವುದು ಸರಿಯಲ್ಲ. ಯೆಹೋವನಾಣೆ, ಆತನ ಅಭಿಷಿಕ್ತನಾಗಿರುವ ನಿಮ್ಮ ಒಡೆಯನನ್ನು ಕಾಯದಿರುವ ನೀವು ಮರಣಕ್ಕೆ ಪಾತ್ರರೇ ಹೌದು. ಅರಸನ ತಲೆಯ ಬಳಿಯಲ್ಲಿದ್ದ ಬರ್ಜಿಯೂ ತಂಬಿಗೆಯೂ ಏನಾದವೋ ನೋಡು” ಎಂದು ಕೂಗಿ ಹೇಳಿದನು. 17 ಸೌಲನು ದಾವೀದನ ಸ್ವರದ ಗುರುತು ಹಿಡಿದು ಅವನನ್ನು, “ದಾವೀದನೇ ನನ್ನ ಮಗನೇ, ಇದು ನಿನ್ನ ಸ್ವರವೋ” ಎಂದು ಕೇಳಲು ಅವನು, “ಅರಸನೇ, ನನ್ನ ಒಡೆಯನೇ ಹೌದು, ನನ್ನ ಸ್ವರವೇ, 18 ನನ್ನ ಸ್ವಾಮಿಯು ತನ್ನ ಸೇವಕನನ್ನು ಈ ಪ್ರಕಾರ ಹಿಂಸಿಸುವುದೇಕೇ? ನಾನೇನು ಮಾಡಿದೆನು? 19 ಯಾವ ಪಾಪಕ್ಕೆ ಕೈಹಾಕಿದೆನು? ನನ್ನ ಅರಸನಾದ ಒಡೆಯನು ದಯವಿಟ್ಟು ತನ್ನ ಸೇವಕನ ಮಾತುಗಳನ್ನು ಲಾಲಿಸಬೇಕು. ನಿನ್ನನ್ನು ನನಗೆ ವಿರೋಧವಾಗಿ ಎಬ್ಬಿಸಿದವನು ಯೆಹೋವನೇ ಆಗಿರುವ ಪಕ್ಷದಲ್ಲಿ, ಆತನಿಗೆ ಘಮಘಮಿಸುವ ನೈವೇದ್ಯವನ್ನು ಅಂಗೀಕರಿಸಬೇಕು. ಮನುಷ್ಯರಾಗಿದ್ದರೆ ಯೆಹೋವನ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರಾಗಿರಲಿ ಯಾಕೆಂದರೆ ಯೆಹೋವನ ಸ್ವತ್ತಿನಲ್ಲಿ ನನಗೆ ಪಾಲು ಸಿಕ್ಕದಂತೆ ‘ಹೋಗಿ ಅನ್ಯದೇವತೆಗಳನ್ನು ಸೇವಿಸು’ ಎಂದು ನನ್ನನ್ನು ತಳ್ಳಿಬಿಟ್ಟರು. 20 ಯೆಹೋವನ ಸಾನ್ನಿಧ್ಯವಿಲ್ಲದಿರುವ ದೇಶದಲ್ಲಿ ನನ್ನ ರಕ್ತವು ಸುರಿಸಲ್ಪಡದಿರಲಿ. ಅಯ್ಯೋ ಗುಡ್ಡಗಳಲ್ಲಿ ಕೌಜುಗವನ್ನು ಹಿಡಿಯಲು ಹೊರಟ ಬೇಟೆಗಾರನೋ ಎಂಬಂತೆ ಇಸ್ರಾಯೇಲರ ಅರಸನು ಹೊರಟು ಬಂದು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನಲ್ಲ” ಅಂದನು. 21 ಆಗ ಸೌಲನು ಅವನಿಗೆ, “ನಾನು ಪಾಪಮಾಡಿದೆನು, ದಾವೀದನೇ ನನ್ನ ಮಗನೇ ಹಿಂದಿರುಗಿ ಬಾ. ಈ ಹೊತ್ತು ನನ್ನ ಜೀವವು ನಿನ್ನ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದೆಂದು ಎಣಿಸಲ್ಪಟ್ಟಿತು. ಆದ್ದರಿಂದ ನಾನು ಇನ್ನು ಮುಂದೆ ನಿನಗೆ ಕೇಡುಮಾಡುವುದಿಲ್ಲ. ಈ ವರೆಗೆ ನಾನು ಮಾಡಿದ್ದು ಹುಚ್ಚುತನವೂ ದೊಡ್ಡ ತಪ್ಪೂ ಆಗಿದೆ” ಎಂದು ಹೇಳಿದನು 22 ದಾವೀದನು ಅರಸನಿಗೆ, “ಅರಸನೇ, ಇಗೋ ನಿನ್ನ ಬರ್ಜಿ ಇಲ್ಲಿದೆ, ಸೇವಕರಲ್ಲೊಬ್ಬನು ಬಂದು ಅದನ್ನು ತೆಗೆದುಕೊಂಡು ಹೋಗಲಿ. 23 ಯೆಹೋವನು ಪ್ರತಿಯೊಬ್ಬನಿಗೂ ಅವನವನ ನೀತಿಸತ್ಯತೆಗಳಿಗೆ ಅನುಸಾರವಾಗಿ ಪ್ರತಿಫಲವನ್ನು ಕೊಡುವನು. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ, ನೀನು ಯೆಹೋವನ ಅಭಿಷಿಕ್ತನೆಂದು ನಾನು ನಿನ್ನ ಮೇಲೆ ಕೈಹಾಕಲಿಲ್ಲ. 24 ನಾನು ಈ ಹೊತ್ತು ನಿನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿದಂತೆ ಯೆಹೋವನು ನನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿ, ಎಲ್ಲಾ ಇಕ್ಕಟ್ಟಿನಿಂದ ಬಿಡಿಸಲಿ” ಎಂದನು. 25 ಆಗ ಸೌಲನು ದಾವೀದನಿಗೆ, “ನನ್ನ ಮಗನೇ ದಾವೀದನೇ ನೀನು ಆಶೀರ್ವಾದ ಹೊಂದು. ನೀನು ಹೇಗೂ ಮಹಾಕಾರ್ಯಗಳನ್ನು ನಡಿಸಿ ಸಫಲನಾಗುವಿ” ಎಂದು ಹೇಳಿ ತನ್ನ ಊರಿಗೆ ಹೊರಟನು. ದಾವೀದನು ತನ್ನ ದಾರಿಯನ್ನು ಹಿಡಿದನು.
<- 1 ಸಮುವೇಲನು 251 ಸಮುವೇಲನು 27 ->