7 ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟು, “ಈ ಮಹಾ ಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತನಾದ ಮಗನನ್ನು ಅನುಗ್ರಹಿಸಿದ ಯೆಹೋವನಿಗೆ ಈಗ ಸ್ತೋತ್ರವಾಗಲಿ” ಎಂದು ನುಡಿದನು. 8 ಇದಲ್ಲದೆ ಅವನು ಸೊಲೊಮೋನನಿಗೆ, “ನೀನು ಹೇಳಿಕಳುಹಿಸಿದ್ದನ್ನು ಕೇಳಿದೆನು. ದೇವದಾರು ವೃಕ್ಷಗಳನ್ನೂ, ತುರಾಯಿ ಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು. 9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ, ಸಮುದ್ರ ಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ, ಅಲ್ಲಿ ಬಿಚ್ಚಿಸಿಕೊಡುವೆನು. ನೀನು ಅವುಗಳನ್ನು ತೆಗೆದುಕೊಂಡು ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರ ಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ” ಎಂದು ಹೇಳಿ ಕಳುಹಿಸಿದನು. 10 ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮರಗಳನ್ನೂ ಮತ್ತು ತುರಾಯಿ ಮರಗಳನ್ನೂ ಕೊಡುತ್ತಿದ್ದನು. 11 ಸೊಲೊಮೋನನಾದರೋ ಪ್ರತಿ ವರ್ಷ ಅವನ ಮನೆಯವರ ಆಹಾರಕ್ಕಾಗಿ ಇಪ್ಪತ್ತು ಸಾವಿರ ಕೋರ್ ಗೋದಿಯನ್ನೂ, ಇಪ್ಪತ್ತು ಕೋರ್ ನಿರ್ಮಲವಾದ ಎಣ್ಣೆಯನ್ನೂ ಕೊಡುತ್ತಿದ್ದನು. 12 ಯೆಹೋವನು ತಾನು ವಾಗ್ದಾನ ಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಒಳ್ಳೆಯ ಸಂಬಂಧವಿತ್ತು, ಅವರಿಬ್ಬರು ಪರಸ್ಪರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು.
13 ಅರಸನಾದ ಸೊಲೊಮೋನನು ಎಲ್ಲಾ ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಜನರನ್ನು ಬಲವಂತವಾಗಿ ಕರೆತಂದನು. 14 ಅವರಲ್ಲಿ ತಿಂಗಳಿಗೆ ಹತ್ತು ಸಾವಿರ ಜನರಂತೆ ಪ್ರತಿತಿಂಗಳು ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು. 15 ಇದಲ್ಲದೆ ಸೊಲೊಮೋನನಿಗೆ ಎಪ್ಪತ್ತು ಸಾವಿರ ಜನರು ಹೊರೆ ಹೊರುವವರೂ, ಎಂಭತ್ತು ಸಾವಿರ ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುವವರೂ ಇದ್ದರು. 16 ಈ ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರು ಮೇಸ್ತ್ರಿಗಳನ್ನು ನೇಮಿಸಿದನು. 17 ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು ಸೊಲೊಮೋನನ ಅಪ್ಪಣೆಯಂತೆ ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೆತ್ತುತ್ತಿದ್ದರು. 18 ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಹಾಗು ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕಾಗಿ ಬೇಕಾಗುವ ಕಲ್ಲು ಮತ್ತು ಮರಗಳನ್ನು ಸಿದ್ಧಪಡಿಸಿದರೂ ಇವರೇ.
<- 1 ಅರಸುಗಳು 41 ಅರಸುಗಳು 6 ->