Link to home pageLanguagesLink to all Bible versions on this site
17
ಕಾಗೆಗಳು ಪ್ರವಾದಿಯಾದ ಎಲೀಯನನ್ನು ಪೋಷಿಸಿದ್ದು
1 ಗಿಲ್ಯಾದಿನ ತಿಷ್ಬೀಯ ಊರಿನವನಾದ ಎಲೀಯ ಎಂಬುವವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಾಣೆ, 2 ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವುದಿಲ್ಲ” ಅಂದನು.

3 ತರುವಾಯ ಯೆಹೋವನು ಎಲೀಯನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ ಯೊರ್ದನ್ ಹೊಳೆಯ ಆಚೆಯಲ್ಲಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ. 4 ಆ ಹಳ್ಳದ ನೀರು ನಿನಗೆ ಕುಡಿಯುವ ಪಾನವಾಗಿರುವುದು. ನಿನಗೆ ಆಹಾರ ತಂದು ಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. 5 ಎಲೀಯನು ಯೆಹೋವನ ಅಪ್ಪಣೆಯಂತೆ ಯೊರ್ದನಿನ ಪೂರ್ವದಿಕ್ಕಿರುವ ಕೆರೀತ್ ಹಳ್ಳದ ಬಳಿಗೆ ಹೋಗಿ ಅಲ್ಲಿ ವಾಸಮಾಡ ತೊಡಗಿದನು. 6 ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ ಮತ್ತು ಮಾಂಸಗಳನ್ನು ತಂದುಕೊಡುತ್ತಿದ್ದವು. ಅವನು ಇವುಗಳನ್ನು ತಿನ್ನುತ್ತಿದ್ದನು. ಹಳ್ಳದ ನೀರು ಅವನಿಗೆ ಪಾನವಾಗಿತ್ತು. 7 ದೇಶದಲ್ಲಿ ಮಳೆಯಿಲ್ಲದ್ದರಿಂದ ಕೆಲವು ದಿನಗಳಾದನಂತರ ಹಳ್ಳವು ಬತ್ತಿಹೋಯಿತು.

ಎಲೀಯನನ್ನು ಪೋಷಿಸಿದ ಚಾರೆಪ್ತಾ ಊರಿನ ವಿಧವೆ
8 ಆಗ ಎಲೀಯನಿಗೆ ಯೆಹೋವನ ಮಾತು ಕೇಳಿ ಬಂತು, 9 ಆತನು ಅವನಿಗೆ, “ನೀನು ಇಲ್ಲಿಂದ ಚೀದೋನ್ಯರ ಚಾರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಮಾಡು. ನಿನ್ನನ್ನು ಸಾಕಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ” ಅಂದನು. 10 ಅವನು ಅಲ್ಲಿಂದ ಹೊರಟು ಚಾರೆಪ್ತಾದ ಊರುಬಾಗಿಲಿನ ಸಮೀಪಕ್ಕೆ ಬಂದಾಗ ಸೌದೆಯನ್ನು ಕೂಡಿಸುತ್ತಿರುವ ಒಬ್ಬ ವಿಧವೆಯನ್ನು ಕಂಡನು. ಅವನು ಆಕೆಯನ್ನು ಕೂಗಿ, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ” ಎಂದು ಹೇಳಿದನು. 11 ಆಕೆಯು ಹೋಗುತ್ತಿರುವಾಗ ಪುನಃ ಆಕೆಯನ್ನು ಕರೆದು, “ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ” ಅಂದನು. 12 ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು. 13 ಆಗ ಎಲೀಯನು ಆಕೆಗೆ, “ಹೆದರಬೇಡ, ನೀನು ಹೇಳಿದಂತೆಯೇ ಮಾಡು. ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. 14 ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ, ‘ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಿಕೆಯಲ್ಲಿರುವ ಹಿಟ್ಟು ತೀರುವುದಿಲ್ಲ ಮತ್ತು ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವುದಿಲ್ಲ’ ” ಎಂದು ಹೇಳುತ್ತಾನೆ. 15 ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ, ಆಕೆಯ ಮನೆಯವರೂ ಮತ್ತು ಎಲೀಯನು ಅದನ್ನು ಅನೇಕ ದಿನಗಳವರೆಗೆ ಊಟಮಾಡಿದರು. 16 ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.
ಎಲೀಯನು ವಿಧವೆಯ ಮಗನನ್ನು ಬದುಕಿಸಿದ್ದು
17 ಕೆಲವು ದಿನಗಳಾದನಂತರ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಹುಡುಗನಿಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. 18 ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು. 19 ಅವನು ಆಕೆಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿ ಅವನನ್ನು ಆಕೆಯ ಮಡಿಲಿನಿಂದ ತೆಗೆದುಕೊಂಡು, ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ ತನ್ನ ಮಂಚದ ಮೇಲೆ ಮಲಗಿಸಿದನು. 20 ಅನಂತರ ಅವನು ಯೆಹೋವನಿಗೆ, “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ, ಆಕೆಗೆ ಕೇಡನ್ನುಂಟುಮಾಡಿದ್ದೇನು?” ಎಂದು ಕೇಳಿದನು. 21 ಆನಂತರ ಹುಡುಗನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರುಗಿ ಬರುವಂತೆ ಮಾಡು” ಎಂಬುದಾಗಿ ಆತನಿಗೆ ಮೊರೆಯಿಟ್ಟನು. 22 ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದ್ದರಿಂದ ಹುಡುಗನ ಪ್ರಾಣವು ತಿರುಗಿ ಬಂದು ಅವನು ಜೀವಿಸಿದನು. 23 ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡು ಹೋಗಿ, ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು ನಿನ್ನ ಮಗನು ಜೀವಿಸುತ್ತಿದ್ದಾನೆ” ಅಂದನು. 24 ಆಗ ಆಕೆಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಇದರಿಂದ ನನಗೆ ಗೊತ್ತಾಯಿತು” ಎಂದು ಹೇಳಿದಳು.

<- 1 ಅರಸುಗಳು 161 ಅರಸುಗಳು 18 ->