16 ಅವನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು 17 ಇಸ್ರಾಯೇಲರ ಅರಸನಾದ ಬಾಷನು ಯೆಹೂದ್ಯರಿಗೆ ವಿರುದ್ಧವಾಗಿ ಯುದ್ಧಮಾಡಿ ಯಾರೂ ಯೆಹೂದ್ಯರ ಅರಸನಾದ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು. 18 ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿ ಮತ್ತು ಬಂಗಾರವನ್ನು ತೆಗೆದುಕೊಂಡು, ಅದನ್ನು ದೂತರ ಮುಖಾಂತರವಾಗಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನೂ, ಹೆಜ್ಯೋನನ ಮೊಮ್ಮಗನೂ, ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿದನು. 19 ಆತನು ಅವನಿಗೆ “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆಯಾದಂತೆ, ಇಗೋ ನಿನಗೆ ಬೆಳ್ಳಿ ಮತ್ತು ಬಂಗಾರವನ್ನು ಕಾಣಿಕೆಯಾಗಿ ಕಳುಹಿಸಿದ್ದೇನೆ. ಇಸ್ರಾಯೇಲರ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವಂತೆ ಅವನ ಸಂಗಡ ನೀನು ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಬಿಡು” ಎಂದು ಹೇಳಿದನು. 20 ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಾಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಆಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು. 21 ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲಿಯೇ ವಾಸಮಾಡಲು ತೊಡಗಿದನು. 22 ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲು, ಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ಮಿಚ್ಪೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು. 23 ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಅವನು ಪಟ್ಟಣಗಳನ್ನು ಕಟ್ಟಿಸಿದ ಸಂಗತಿಗಳೂ, ಅವನ ಇತರ ಕಾರ್ಯಗಳು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು. 24 ಅವನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು.