Link to home pageLanguagesLink to all Bible versions on this site
6
ಕ್ರೈಸ್ತರು ಕ್ರೈಸ್ತರಲ್ಲದವರ ಮುಂದೆ ವ್ಯಾಜ್ಯವಾಡಿದ್ದನ್ನು ಕುರಿತದ್ದು
1 ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ [a]ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ? 2 [b]ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ? 3 ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ? 4 ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನಿಮ್ಮಲ್ಲಿದ್ದರೆ, ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಏಕೆ ನೇಮಿಸಿಕೊಳ್ಳುತ್ತೀರಿ? 5 ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ? 6 ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ? 7 ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ [c]ನಷ್ಟವನ್ನು ಯಾಕೆ ತಾಳಬಾರದು? 8 ಆದರೆ ನೀವು ನಿಮ್ಮ [d]ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ. 9 ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು, 10 ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು [e]ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 11 [f]ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು [g]ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, [h]ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ [i]ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ
12 [j]“ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು,” ಆದರೆ ಎಲ್ಲವು ಪ್ರಯೋಜನಕರವಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು” ಆದರೆ ನಾನು ಯಾವುದಕ್ಕೂ ಅಧೀನನಲ್ಲ. 13 [k]“ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. [l]ಕರ್ತನಿಗೋಸ್ಕರ ಇರುವುದಾಗಿದೆ. [m]ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ. 14 [n]ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ [o]ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು. 15 [p]ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು 16 ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? [q]“ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ. 17 ಆದರೆ ಕರ್ತನೊಂದಿಗೆ ಸೇರಿಕೊಂಡವನು [r]ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ. 18 ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 19 [s]ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು [t]ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ? 20 [u]ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ [v]ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.

<- 1 ಕೊರಿಂಥದವರಿಗೆ 51 ಕೊರಿಂಥದವರಿಗೆ 7 ->